ಕಾಬೂಲ್‌[ಆ.19]: ಮದುವೆ ಸಮಾರಂಭಕ್ಕೆ ಸೇರಿದ್ದ ಸಾವಿರಾರು ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಆತ್ಮಾಹುತಿ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ 63 ಮಂದಿ ಸಾವಿಗೀಡಾದ ದಾರುಣ ಘಟನೆ ಆಷ್ಘಾನಿಸ್ತಾನದಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಮದುಮಗ ಬದುಕಿ ಉಳಿದಿದ್ದು, ತನ್ನೆಲ್ಲಾ ಬಂಧು ಬಳಗ, ಸ್ನೇಹಿತರನ್ನು ಕಳೆದುಕೊಂಡಿದ್ದಾರೆ. ಇದು ಕಾಬೂಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎನಿಸಿಕೊಂಡಿದೆ.

ಆಷ್ಘಾನಿಸ್ತಾನದಲ್ಲಿ ತನ್ನ ಸೇನೆಯನ್ನು ಕಡಿಮೆ ಮಾಡುವ ನಿಟ್ಟಿನಿಂದ ತಾಲಿಬಾನ್‌ ಜೊತೆ ಒಂದು ಒಪ್ಪಂದಕ್ಕೆ ಬರಲು ಅಮೆರಿಕ ತೀರ್ಮಾನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಘಟನೆಯ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿದೆ.

ಷ್ಘಾನಿಸ್ತಾನದಲ್ಲಿ ಮದುವೆ ಸಮಾರಂಭಗಳು ಅದ್ಧೂರಿಯಾಗಿ ನಡೆಯುತ್ತವೆ. ಸಾವಿರಾರು ಮಂದಿ ಅತಿಥಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಿಯಾ ಸಮುದಾಯಕ್ಕೆ ಸೇರಿದ ಮದುವೆ ಸಮಾರಂಭ ಇದಾಗಿತ್ತು. ಬಾಂಬ್‌ ಸ್ಫೋಟದಿಂದಾಗಿ ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ಸೂತಕದ ಮನೆಯಾಗಿ ಮಾರ್ಪಟ್ಟಿದೆ. ಸಭಾಂಗಣದಲ್ಲೆಲ್ಲಾ ಮದುವೆಗೆ ಬಂದ ಅತಿಥಿಗಳ ಶವಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಕ್ತದ ಕೋಡಿ ಹರಿದಿದೆ. ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿ, 182 ಮಂದಿ ಗಾಯಗೊಂಡಿದ್ದಾರೆ.

ಸುನ್ನಿ ಪ್ರಾಬಲ್ಯವಿರುವ ಅಷ್ಘಾನಿಸ್ತಾನದಲ್ಲಿ ಆಗಾಗ ಶಿಯಾ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ. ಕಳೆದ 28ರಂದು ನಡೆದ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿದ್ದರು.