ಮಾಸ್ಕೋ[ಜು.11]: ವ್ಯಾಯಾಮ ದೇಹದ ಆರೋಗ್ಯ ಕಾಪಾಡುವುದರೊಂದಿಗೆ, ಇದು ಮೆದುಳು ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಕೂಡಾ ಶಕ್ತಿಯುವಾಗುತ್ತವೆ. ಇಷ್ಟೇ ಅಲ್ಲ ಒಂದೇ ಬಾರಿ ಮುರು ಸಾವಿರ ಪುಶ್ ಅಪ್ಸ್ ಮಾಡಿದರೆ ಐಷಾರಾಮಿ ಮನೆ ಅಥವಾ, ಕಾರು ಕೂಡಾ ಪಡೆಯುವ ಸಾಧ್ಯತೆಗಳಿವೆ. ಇದು ತಮಾಷೆಯಲ್ಲ ಕಣ್ರೀ...!

ಹೌದು ರಷ್ಯಾದ 6 ವರ್ಷದ ಬಾಲಕನೊಬ್ಬ ಬಿಡುವಿಲ್ಲದೇ 3270 ಪುಶ್ ಅಪ್ಸ್ ಮಾಡಿ, ಐಷಾರಾಮಿ ಮನೆಯನ್ನು ಪಡೆದಿದ್ದಾನೆ. ರಷ್ಯಾದ ನೋವಿ ರೆದಾಂತ್ ನ ಇಬ್ರಾಹಿಂ ಲ್ಯೋನೋವ್ ಹೆಸರಿನ ಬಾಲಕ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆಯುವುದಲ್ಲಿ ಯಶಸ್ವಿಯಾಗಿದ್ದಾನೆ. ಈ ಬಾಲಕನ ಫಿಟ್ನೆಸ್ ಕಂಡು ಅಚ್ಚರಿಗೊಂಡ ಕ್ರೀಡಾ ಕ್ಲಬ್ ಆತನಿಗೆ ಇಡೀ ಅಪಾರ್ಟ್ ಮೆಂಟ್ ಒಂದನ್ನು ಗಿಫ್ಟ್ ಮಾಡಿದೆ.

ಇಬ್ರಾಹಿಂ ಪುಶ್ ಅಪ್ಸ್ ಮಾಡುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದೆ.

ಇಬ್ರಾಹಿಂ ಲ್ಯೋನೋವ್ ಈ ಅಸಾಧಾರಣ ಸಾಧನೆ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಾಗಿದೆ. ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ಲಬ್ ನ ಸದಸ್ಯರಾಗಿದ್ದು, ಈ ಸ್ಪರ್ಧೆಗಾಗಿ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆಂದು ಆಂಗ್ಲ ಸುದ್ದಿಜಾಲ ತಾಣವೊಂದು ವರದಿ ಮಾಡಿದೆ.