ರಾಜ್ಯದಲ್ಲಿ ಕೊಳವೆ ಬಾವಿ ಪ್ರಕರಣಗಳು ಕೊನೆಗಾಣುತ್ತಿಲ್ಲ. ಕೊಳವೆಬಾವಿಗಳಿಗೆ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಘಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರ್ಕಾರಗಳದ್ದು ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಇದೀಗ ಮತ್ತೋರ್ವ ಪುಟ್ಟ ಬಾಲಕಿ ಆಳದ ಕೊಳವೆಬಾವಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಬೆಳಗಾವಿ(ಎ.23): ರಾಜ್ಯದಲ್ಲಿ ಕೊಳವೆ ಬಾವಿ ಪ್ರಕರಣಗಳು ಕೊನೆಗಾಣುತ್ತಿಲ್ಲ. ಕೊಳವೆಬಾವಿಗಳಿಗೆ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಘಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುವ ಸರ್ಕಾರಗಳದ್ದು ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಇದೀಗ ಮತ್ತೋರ್ವ ಪುಟ್ಟ ಬಾಲಕಿ ಆಳದ ಕೊಳವೆಬಾವಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡಿ ಗ್ರಾಮ ಈ ದುರಂತಕ್ಕೆ ಸಾಕ್ಷಿಯಾಗಿದೆ. ನಿನ್ನೆ ಸಂಜೆ ಸುಮಾರು 5.30 ರ ವೇಳೆಗೆ ಗ್ರಾಮದ ಅಜಿತ್ ಮಾದರಾ ಹಾಗೂ ಸವಿತಾ ಮಾದರಾ ದಂಪತಿ ಪುತ್ರಿ6 ವರ್ಷದ ಬಾಲಕಿ ಕಾವೇರಿ ಕಟ್ಟಿಗೆ ಆರಿಸಲು ಹೋಗಿದ್ದ ವೇಳೆ 300 ಅಡಿ ಆಳದ ತೊಳವೆ ಬಾವಿಗೆ ಬಿದ್ದಿದ್ದಾಳೆ. ಬತ್ತಿದ್ದ ಬೋರ್ ವೇಲ್ ಕೇಸಿಂಗ್ ಪೈಪ್ ತೆಗೆದಿದ್ದು ಆ ಬಾವಿಯೊಳಗೆ ಬಿದ್ದು ಕಾವೇರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಬಾವಿಗೆ ಬಿದ್ದ ತಕ್ಷಣ ಬಾಲಕಿ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಾಲಕಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳದಲ್ಲಿ ಸಾವಿರಾರು ಜನರು ಬೀಡು ಬಿಟ್ಟಿದ್ದು ಬಾಲಕಿ ಪೋಷಕರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾಧಿಕಾರಿ ಜಯರಾಮ್ ಎಸ್ ಪಿ ರವಿಕಾಂತೇಗೌಡ ತಹಶಿಲ್ದಾರ್ ಆರ್. ಉಮಾದೇವಿ, ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆ ಪರಿಶೀಲಿಸುತ್ತಿದ್ದಾರೆ.
ಕೊಳವೆ ಬಾವಿ ಮುಚ್ಚದೆ ಬಿಟ್ಟಿದ್ದ ಬೋರ್'ವೆಲ್ ಮಾಲೀಕ
ಕೊಳವೆಬಾವಿ ಗ್ರಾಮದ ಶಂಕರ ಹಿಪ್ಪರಗಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಸುಮಾರು 3೦೦ಅಡಿ ಆಳದ ಕೊಳವೆಬಾವಿ ಇದಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಕೊರೆಯಿಸಿದ್ದು ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಶಂಕರ್ ಹಿಪ್ಪರಗಿ ಗ್ರಾಮದಿಂದ ಎಸ್ಕೇಪ್ ಆಗಿದ್ದಾನೆ. ಬಾಲಕಿ ರಕ್ಷಣೆಗಾಗಿ ಸತತ ಕಾರ್ಯಾಚರಣೆ ನಡೆಯುತ್ತಿದ್ದು 6 ವರ್ಷದ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಕಾವೇರಿ ಬೇಗ ಬದುಕಿ ಬರಲಿ ಅಂತಾ ರಾಜ್ಯಾದ್ಯಂತ ಪ್ರಾರ್ಥಿಸುತ್ತಿದ್ದಾರೆ.
