ಪಡಿತರಕ್ಕೆ ಆಧಾರ್ ಲಿಂಕ್ ಮಾಡಲು 6 ತಿಂಗಳು ಕಾಲಾವಕಾಶ

First Published 20, Jun 2018, 10:19 AM IST
6 month deadline to link Aadhar card to ration card
Highlights

ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರ  ಪೈಕಿ ಹಲವರಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಧಾರ್ ಸಂಖ್ಯೆ ಜೋಡಣೆಗೆ ಮುಂದಿನ ಆರು ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಆಹಾರ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್‌ಖಾನ್ ಹೇಳಿದ್ದಾರೆ.

ಬೆಂಗಳೂರು (ಜೂ. 20): ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರ ಪೈಕಿ ಹಲವರಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಧಾರ್ ಸಂಖ್ಯೆ ಜೋಡಣೆಗೆ ಮುಂದಿನ ಆರು ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಆಹಾರ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್‌ಖಾನ್ ಹೇಳಿದ್ದಾರೆ.

ಕಳೆದ ಬಾರಿ ಆಧಾರ್  ಸಂಖ್ಯೆ ಜೋಡಣೆ ಮಾಡಲು ಸಾರ್ವಜನಿಕರಿಗೆ ಸೂಕ್ತ ಕಾಲಾವಕಾಶ ದೊರೆತಿರಲಿಲ್ಲ. ಹೀಗಾಗಿ ಆಧಾರ್ ಸಂಖ್ಯೆ ಜೋಡಿಸದವರಿಗೆ ಮರು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ ಪಡಿತರ ಚೀಟಿಗೆ ಕುಟುಂಬ ಸದಸ್ಯರ ಆಧಾರ್ ಜೋಡಣೆ ಮಾಡಲು ಮುಂದಿನ ಆರು ತಿಂಗಳವರೆಗೆ ಕಾಲ ಮಿತಿ ವಿಸ್ತರಿಸಲಾಗುವುದು ಎಂದು ಹೇಳಿದರು.

ಆಹಾರ ಇಲಾಖೆಯು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಪಡಿತರ ವಿತರಣೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಸುಮಾರು 3 ಕೋಟಿ ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದ್ದು,
45 ಲಕ್ಷ ಕಾರ್ಡ್ ವಿತರಿಸುವುದು ಬಾಕಿ ಇದೆ. ಈ ಬಗ್ಗೆಯೂ ಅಧಿಕಾರಿಗಳ ಬಳಿ ಚರ್ಚಿಸಿದ್ದು ಕೂಡಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಗಿ ಖರೀದಿಯಲ್ಲಿ ಹಣ ಪೋಲು: ಪಡಿತರ ವಿತರಣೆಗಾಗಿ ರಾಗಿ ಹಾಗೂ ಅಕ್ಕಿ ಖರೀದಿ ಬಗ್ಗೆ ಮಾಹಿತಿ ನೀಡಿದ ಸಚಿವರು, ಮಾರುಕಟ್ಟೆಯಲ್ಲಿ ರಾಗಿ ಕೆಜಿಗೆ 19 ರು.ಗೆ ಸಿಗುತ್ತದೆ ಎಂಬ ಮಾಹಿತಿ ಇದೆ. ಆದರೆ, ನಾವು ಇಲಾಖೆಯಿಂದ ಪ್ರತಿ ಕೆ.ಜಿಗೆ 24.47 ರು.ನಂತೆ ಖರೀದಿ ಮಾಡುತ್ತಿದ್ದೇವೆ. ಹಾಗಾಗಿ ಹೆಚ್ಚುವರಿ ಹಣ ಏಕೆ ಪೋಲು ಮಾಡಬೇಕು? ಅಧಿಕಾರಿಗಳು ಇದರಲ್ಲಿ ಮೋಸ ಮಾಡುತ್ತಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು.

ಇಲಾಖೆಗೆ ರಾಗಿ ಖರೀದಿಯ ನೇರ ಲಾಭ ರೈತರಿಗೆ ಸಿಗುವಂತಾಗಬೇಕು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ ಎಂದರು. ಸಚಿವ ಸ್ಥಾನ ಸಿಕ್ಕರೆ ಗಿನ್ನೆಸ್ ದಾಖಲೆ ಮಾಡುತ್ತೇನೆ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ. 

loader