ಬೆಂಗಳೂರು :  ಬಿಜೆಪಿಯ ಕೆ.ಬಿ.ಶಾಣಪ್ಪ, ತಾರಾ ಅನೂರಾಧ ಹಾಗೂ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿರುವ ಎಂ.ಡಿ.ಲಕ್ಷ್ಮೇನಾರಾಯಣ ಅವರ ವಿಧಾನ ಪರಿಷತ್‌ ನಾಮಕರಣ ಸದಸ್ಯತ್ವದ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು, ತೆರವಾದ ಸ್ಥಾನಗಳಿಗಾಗಿ ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆ ಮಾಡುವ ಮೂರು ಸ್ಥಾನಗಳು ಈ ಹಿಂದೆಯೇ ತೆರವುಗೊಂಡಿದ್ದು, ಈಗ ಒಟ್ಟು ಆರು ಸ್ಥಾನಗಳು ಖಾಲಿಯಾದಂತಾಗಿದೆ.

ಈ ಪೈಕಿ ನಾಮಕರಣ ಮಾಡುವ ಮೂರು ಸ್ಥಾನಗಳು ಸರ್ಕಾರದ ಕೈಯಲ್ಲೇ ಇದೆ. ಈ ಮೂರರ ಪೈಕಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಂಚಿಕೊಳ್ಳಬೇಕಿದೆ. ಇದುವರೆಗೆ ನಡೆದುಕೊಂಡು ಬಂದಿರುವ ಸೂತ್ರದ ಪ್ರಕಾರ ಮೂರರಲ್ಲಿ ಎರಡು ಕಾಂಗ್ರೆಸ್ಸಿಗೆ ಮತ್ತು ಒಂದು ಜೆಡಿಎಸ್‌ ಪಾಲಾಗುವ ಸಾಧ್ಯತೆಯಿದೆ.

ಆದರೆ, ಇದೇ ಸೂತ್ರ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಅನ್ವಯವಾಗುವುದಿಲ್ಲ. ಅಲ್ಲಿ ಒಂದು ಸ್ಥಾನ ಬಿಜೆಪಿ ಪಾಲಾಗುವುದು ನಿಶ್ಚಿತ. ಹೀಗಾಗಿ ಇನ್ನುಳಿಯುವ ಎರಡು ಸ್ಥಾನಗಳ ಪೈಕಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದು ಸ್ಥಾನ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಮೂರು ರಾಜಕೀಯ ಪಕ್ಷಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಭರಾಟೆಯಲ್ಲಿ ಮುಳುಗಿರುವುದರಿಂದ ಸದ್ಯಕ್ಕೆ ಬಿರುಸಿನ ಚಟುವಟಿಕೆ ಕಂಡು ಬರುತ್ತಿಲ್ಲ. ಜೆಡಿಎಸ್‌ನಲ್ಲಿ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಸೋತ ಶಾಸಕರು ಪ್ರಯತ್ನ ನಡೆಸಿದ್ದಾರೆ. ಅವರಲ್ಲಿ ಮಧು ಬಂಗಾರಪ್ಪ, ವೈ.ಎಸ್‌.ವಿ.ದತ್ತ, ಎನ್‌.ಎಚ್‌.ಕೋನರೆಡ್ಡಿ ಅವರ ಹೆಸರುಗಳು ಕೇಳಿಬರುತ್ತಿವೆ. ನಾಮಕರಣ ಪ್ರಕ್ರಿಯೆ ಇನ್ನೂ ಆರಂಭವಾಗದಿದ್ದರೂ ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ರಂಗಪ್ಪ ಅವರ ಹೆಸರು ಜೆಡಿಎಸ್‌ ಪಾಳೆಯದಿಂದ ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಬಿಜೆಪಿಗೆ ಲಭಿಸಬಹುದಾದ ಒಂದು ಸ್ಥಾನಕ್ಕೆ ಈವರೆಗೆ ಯಾವುದೇ ಬಲವಾದ ಹೆಸರು ಕೇಳಿಬಂದಿಲ್ಲ. ಚುನಾವಣೆ ಘೋಷಣೆಯಾದ ನಂತರ ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಭರ್ಜರಿ ಲಾಬಿ:  ಕಾಂಗ್ರೆಸ್‌ನಲ್ಲಿ ನಾಮನಿರ್ದೇಶನದಲ್ಲಿ ಎರಡು ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನ ಸೇರಿದಂತೆ ಒಟ್ಟು ಮೂರು ಸ್ಥಾನ ದೊರೆಯಲಿರುವುದರಿಂದ ಭಾರಿ ಪೈಪೋಟಿ ನಿರ್ಮಾಣವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಇಲ್ಲೂ ಬಣ ರಾಜಕಾರಣ ತಲೆಹಾಕಿದೆ!

ಈ ಪೈಕಿ ನಾಮನಿರ್ದೇಶನದಲ್ಲಿ ಸಾಹಿತ್ಯ ಕ್ಷೇತ್ರದಿಂದ ಬರಗೂರು ರಾಮಚಂದ್ರಪ್ಪ ಹಾಗೂ ಕವಿ ಸಿದ್ದಲಿಂಗಯ್ಯ ಅವರ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿದೆ. ಬರಗೂರು ಅವರ ಹೆಸರು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಾಳಯದಿಂದ ಕೇಳಿ ಬಂದರೆ, ಸಿದ್ದರಾಮಯ್ಯ ಅವರ ಪಾಳಯದಿಂದ ಸಿದ್ದಲಿಂಗಯ್ಯ ಅವರ ಹೆಸರು ಕೇಳಿಬರುತ್ತಿದೆ. ಸಮಾಜ ಸೇವೆ ಕ್ಷೇತ್ರದಿಂದ ನಾಮನಿರ್ದೇಶನಕ್ಕೆ ಮಾಜಿ ಮೇಯರ್‌ ರಾಮಚಂದ್ರಪ್ಪ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿದೆ.

ಕಳೆದ ಎರಡು ಬಾರಿಯಿಂದಲೂ ಅವಕಾಶ ವಂಚಿತರಾಗಿರುವ ಮಾಜಿ ಮೇಯರ್‌ ರಾಮಚಂದ್ರಪ್ಪ ಅವರ ಹೆಸರನ್ನು ಕಳೆದ ಬಾರಿಯೇ ಸಿದ್ದರಾಮಯ್ಯ ಪಾಳಯದಿಂದ ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ, ತೀವ್ರ ಒತ್ತಡದಿಂದಾಗಿ ಸಿದ್ದರಾಮಯ್ಯ ಅವರು ಸಿ.ಎಂ. ಇಬ್ರಾಹಿಂ ಹಾಗೂ ಗೋವಿಂದರಾಜು ಅವರಿಗೆ ಶಿಫಾರಸು ಮಾಡಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ರಾಮಚಂದ್ರಪ್ಪ ಹೆಸರು ಪರಿಗಣನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಈ ಹುದ್ದೆಯ ಸಮೀಪ ಬಂದಿದ್ದರೂ ಅವಕಾಶ ವಂಚಿತರಾಗಿರುವ ಪಕ್ಷದ ನಿಷ್ಠಾವಂತ ಎನಿಸಿದ ರಾಮಚಂದ್ರಪ್ಪ ಅವರಿಗೆ ಈ ಬಾರಿ ಅವಕಾಶ ಸಿಗುವುದೇ ಎಂದು ಕಾದು ನೋಡಬೇಕಿದೆ.

ಇನ್ನು ವಿಧಾನಪರಿಷತ್ತಿನಿಂದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆಯುವ ಏಕೈಕ ಸ್ಥಾನಕ್ಕೆ ದೊಡ್ಡ ಪೈಪೋಟಿಯೇ ಇದೆ. ಪರಮೇಶ್ವರ್‌ ಬಣದಿಂದಲೇ ಹಿರಿಯ ಮುಖಂಡರಾದ ಮಾರ್ಗರೇಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವ, ಎಂ.ಸಿ. ವೇಣುಗೋಪಾಲ್‌, ವಿ.ಆರ್‌. ಸುದರ್ಶನ್‌, ಬಿ.ಕೆ. ಚಂದ್ರಶೇಖರ್‌ ಅವರು ಈ ಹುದ್ದೆ ಗಿಟ್ಟಿಸಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಯಾರಿಂದ ತೆರವು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮಕರಣಗೊಂಡಿದ್ದ ವಿಧಾನಪರಿಷತ್ತಿನ ಮೂವರು ಸದಸ್ಯರ ಅವಧಿ ಮುಕ್ತಾಯಗೊಂಡಿದ್ದು, ಬಿಜೆಪಿಯ ಕೆ.ಬಿ.ಶಾಣಪ್ಪ, ತಾರಾ ಅನುರಾಧ ಹಾಗೂ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿರುವ ಎಂ.ಡಿ.ಲಕ್ಷ್ಮೇನಾರಾಯಣ ಅವರು ತಮ್ಮ ಸ್ಥಾನ ತೆರವುಗೊಳಿಸಿದ್ದಾರೆ. ಅದೇ ರೀತಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ವಿ.ಸೋಮಣ್ಣ ಹಾಗೂ ಕಾಂಗ್ರೆಸ್ಸಿನ ಡಾ.ಜಿ.ಪರಮೇಶ್ವರ್‌ ಅವರು ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.