Asianet Suvarna News Asianet Suvarna News

ಹನಿ ಟ್ರ್ಯಾಪ್‌' ಮೋಸದಾಟದಲ್ಲಿ ಬ್ಯಾಂಕ್‌ ಮ್ಯಾನೇಜರ್'ರನ್ನೇ ಹೇಗೆ ಸಿಲುಕಿಸಿದರು ಗೊತ್ತೇ?

ಬ್ಯಾಂಕ್‌ ಪರೀಕ್ಷೆ ಬರೆದಿರುವ ಯುವತಿಯೊಬ್ಬಳಿಗೆ ಉದ್ಯೋಗ ನೀಡುವಲ್ಲಿ ಸಹಕರಿಸಬೇಕು ಎಂದು ಬ್ಯಾಂಕ್‌ ಮೆನೇಜರ್‌ಗೆ ಶಿಲ್ಪಾ ಕರೆ ಮಾಡಿದ್ದಳು. ಈ ವೇಳೆ ಆಕೆಯನ್ನು ಕಚೇರಿಗೆ ಬರಲು ಹೇಳಿ ಎಂದು ಮ್ಯಾನೇಜರ್‌ ಹೇಳಿದಾಗ, ಕಚೇರಿಗೆ ಬೇಡ ಮನೆಗೆ ಹೋಗಲು ಹೇಳುತ್ತೇನೆ ಎಂದು ಶಿಲ್ಪಾ ಹೇಳಿದ್ದಾಳೆ.

6 arrest for honeytrap

ಮಂಗಳೂರು(ಸೆ.25): ಬ್ಯಾಂಕ್‌ ಮ್ಯಾನೇಜರ್'ರೊಬ್ಬರನ್ನು ಮೋಸದಾಟದಲ್ಲಿ ಸಿಲುಕಿಸಿ ಒಂದು ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದ ಯುವತಿ ಸೇರಿ ಆರು ಮಂದಿಯನ್ನು ಉರ್ವ ಹಾಗೂ ಬರ್ಕೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶ್ರೀಜಿತ್‌, ಯತೀಶ್‌, ಅವಿನಾಶ್‌, ನಿತಿನ್‌, ರಂಜಿತ್‌ ಹಾಗೂ ತೃಪ್ತಿ ಬಂಧಿತರು. ಬಳ್ಳಾಲ್‌ಬಾಗ್‌ನ ಫ್ಲ್ಯಾಟೊಂದರಲ್ಲಿ ಬ್ಯಾಂಕ್‌ ಮೆನೇಜರ್‌ ವಾಸವಾಗಿದ್ದರು. ಇದೇ ಫ್ಲ್ಯಾಟ್‌ನಲ್ಲಿ ಶಿಲ್ಪಾ ಎಂಬ ಯುವತಿ ಕೂಡಾ ವಾಸವಾಗಿದ್ದಳು. ಆದರೆ, ಆಕೆಯ ವರ್ತನೆಯಲ್ಲಿ, ವ್ಯವಹಾರದಲ್ಲಿ ಸಂಶಯ ಬಂದದ್ದರಿಂದ ಆಕೆಯನ್ನು ಆ ಫ್ಲ್ಯಾಟ್‌ನಿಂದ ಓಡಿಸಲಾಗಿತ್ತು. ಈಕೆಯ ಬಳಿ ಬ್ಯಾಂಕ್‌ ಮೆನೇಜರ್‌ ಅವರ ಮೊಬೈಲ್‌ ಸಂಖ್ಯೆ ಇದ್ದಿದ್ದೇ ಸಮಸ್ಯೆಗೆ ಕಾರಣವಾಯಿತು.

ಬ್ಯಾಂಕ್‌ ಪರೀಕ್ಷೆ ಬರೆದಿರುವ ಯುವತಿಯೊಬ್ಬಳಿಗೆ ಉದ್ಯೋಗ ನೀಡುವಲ್ಲಿ ಸಹಕರಿಸಬೇಕು ಎಂದು ಬ್ಯಾಂಕ್‌ ಮೆನೇಜರ್‌ಗೆ ಶಿಲ್ಪಾ ಕರೆ ಮಾಡಿದ್ದಳು. ಈ ವೇಳೆ ಆಕೆಯನ್ನು ಕಚೇರಿಗೆ ಬರಲು ಹೇಳಿ ಎಂದು ಮ್ಯಾನೇಜರ್‌ ಹೇಳಿದಾಗ, ಕಚೇರಿಗೆ ಬೇಡ ಮನೆಗೆ ಹೋಗಲು ಹೇಳುತ್ತೇನೆ ಎಂದು ಶಿಲ್ಪಾ ಹೇಳಿದ್ದಾಳೆ. ಬ್ಯಾಂಕ್‌ ಮ್ಯಾನೇಜರ್‌ ಅವರ ಮನೆಯವರು ಬೆಂಗಳೂರಿನಲ್ಲಿರುವುದರಿಂದ ಶಿಲ್ಪಾ ಷಡ್ಯಂತರ ರೂಪಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮ್ಯಾನೇಜರ್‌ ಮನೆಗೆ ಯುವತಿ ತೃಪ್ತಿ ಹಾಗೂ ಐವರನ್ನು ಕಳುಹಿಸಿದ್ದಾಳೆ. ಈ ತಂಡ ಎರಡು ದಿನಗಳೊಳಗೆ ಒಂದು ಲಕ್ಷ ರುಪಾಯಿ ನೀಡಬೇಕು. ಇಲ್ಲದಿದ್ದಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ಮಾಡುತ್ತಿದ್ದೀರೆಂದು ಪ್ರಚಾರ ಮಾಡುವುದಾಗಿ ಮ್ಯಾನೇಜರ್‌ನ್ನು ಬೆದರಿಸಿದ್ದಾರೆ.

ಬಳಿಕ ಇವರಲ್ಲಿದ್ದ ಚೆಕ್‌ಬುಕ್‌ ಹಾಗೂ ಕೆಲವು ದಾಖಲೆಗಳನ್ನು ಕೊಂಡೊಯ್ದ ಆರೋಪಿಗಳು ಲಕ್ಷಕ್ಕಾಗಿ ಪೀಡಿಸುತ್ತಿದ್ದರು. ಬಳಿಕ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಶಿಲ್ಪಾ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಸದ್ಯ ಈಕೆ ಕಾಲುಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಕೆಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios