ರಾಜ್ಯದಲ್ಲಿ ಒಂದು ವರ್ಷದಲ್ಲಿ 578 ಅಪ್ರಾಪ್ತ ಗರ್ಭಿಣಿಯರು ಪತ್ತೆ!
2018-19ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವಿತರಿಸಿದ ತಾಯಿ ಕಾರ್ಡ್‌ನಲ್ಲಿ ಬಯಲಾದ ಸತ್ಯ, ಬಾಲ್ಯ ವಿವಾಹ ಶಂಕೆ
ಎಲ್. ಅಶ್ವತ್ಥನಾರಾಯಣ, ಕನ್ನಡಪ್ರಭ
ಚಿಕ್ಕಬಳ್ಳಾಪುರ[ಮೇ.11]: ಎಲ್.ಅಶ್ವತ್ಥನಾರಾಯಣ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಬಾಲ್ಯವಿವಾಹಗಳಿಗೆ ಸುದ್ದಿಯಾಗುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ ತಾಯಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಕಳೆದೊಂದು ವರ್ಷದಲ್ಲಿ 578 ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸಿದ್ದಾರೆ!
ಈ ಆಘಾತಕಾರಿ ಸತ್ಯವನ್ನು ಸ್ವತಃ ಸರ್ಕಾರದ ದಾಖಲೆಗಳೇ ಬಹಿರಂಗಪಡಿಸಿವೆ. 2018 ಮತ್ತು 19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 578 ಮಂದಿ ಅಪ್ರಾಪ್ತ ಹೆಣ್ಣು ಮಕ್ಕಳು ಜಿಲ್ಲಾಸ್ಪತ್ರೆಯಿಂದ ‘ತಾಯಿ ಕಾರ್ಡ್’ ಪಡೆದಿದ್ದಾರೆ. ಅಂದರೆ ಪ್ರತಿ ದಿನ ಸುಮಾರು ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ತಾಯಂದಿರಾಗುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಾಲ್ಯವಿವಾಹದಂಥ ಅನಿಷ್ಠ ತಡೆಯಲು ಅಧಿಕಾರಿವರ್ಗ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಯಾವುದೇ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದಕ್ಕೂ ಮುನ್ನ ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಇಂಥ ಮದುವೆಗಳನ್ನು ತಡೆಯಲೆಂದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಪೊಲೀಸ್ ಇಲಾಖೆಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಅಪ್ರಾಪ್ತೆಯರಿಗೆ ಮದುವೆ ಮಾಡಲು ಮುಂದಾದಾಗ ಮಾಹಿತಿ ಸಂಗ್ರಹಿಸಿ ಬುದ್ಧಿವಾದ ಹೇಳಿ, ಒಪ್ಪದಿದ್ದಾಗ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಕೆಲಸವನ್ನು ಈ ಸಮಿತಿ ಮಾಡುತ್ತದೆ. ಆದರೆ, ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಈ ಸಮಿತಿ ಸಂಪೂರ್ಣ ವಿಫಲವಾಗಿದೆ.
ಸದ್ಯ ಜಿಲ್ಲಾ ಆಸ್ಪತ್ರೆಯಿಂದ ತಾಯಿ ಕಾರ್ಡ್‌ನಿಂದ ಲಭ್ಯ ಮಾಹಿತಿ ಆಧಾರದಲ್ಲಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ೫೦೦ಕ್ಕೂ ಹೆಚ್ಚು ಅಪ್ರಾಪ್ರರು ಗರ್ಭಿಣಿಯರಾಗಿದ್ದಾರೆ ಎಂಬ ಅಂಕಿ-ಅಂಶ ನೀಡಲಾಗಿದೆ. ಇನ್ನು ಖಾಸಗಿ ಆಸ್ಪತ್ರೆಗೆ ತೋರಿಸಿರುವವರ, ಗರ್ಭಪಾತ ಮಾಡಿಕೊಂಡವರ ಸಂಖ್ಯೆ ಸೇರಿಸಿದರೆ ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನಕ್ಕೆ ತಳ್ಳಲ್ಪಡುವ ಹೆಣ್ಣುಮಕ್ಕಳ ಸಂಖ್ಯೆ ಇನ್ನೂ ಹೆಚ್ಚಿರುವ ಶಂಕೆ ಇದೆ.
ಡಿಸಿ ಖಡಕ್ ಸೂಚನೆ:
ಜಿಲ್ಲೆಯಲ್ಲಿ ಬಾಲ್ಯವಿವಾಹದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಸಭೆ ಕರೆದಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಆರೋಗ್ಯ ಇಲಾಖೆ ನೀಡಿದ ಮಾಹಿತಿ ಕೇಳಿ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಬಾಲಕಿಯರನ್ನು ಹುಡುಕಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಖಡಕ್ ಸೂಚನೆಯನ್ನೂ ನೀಡಿದ್ದರು.
ಅಲ್ಲದೆ ಬಾಲ್ಯವಿವಾಹ ಘಟನೆಗಳು ಗಮನಕ್ಕೆ ಬಂದರೂ ಪ್ರಕರಣ ದಾಖಲಿಸದ ಅಧಿಕಾರಿಗಳ ವಿರುದ್ಧವೇ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇರುವ ಕಾರಣ ಆ ನಿಟ್ಟಿನಲ್ಲೂ ಕ್ರಮ ಕೈಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಅಷ್ಟೂ ಮಂದಿ ಗರ್ಭಿಣಿಯರನ್ನು ಹುಡುಕಿ ಮಾಹಿತಿ ಕಲೆಹಾಕು ವಂತೆಯೂ ಸೂಚಿಸಿದ್ದಾರೆಂದು ಹೇಳಲಾಗಿದೆ.