ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮವಾರದಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ರಾಜಕುಮಾರ' ಚಿತ್ರದ ಪ್ರದರ್ಶನ ಶುಲ್ಕಕ್ಕೆ ಹೊಂಬಾಳೆ ಫಿಲಂಸ್‌ ಸಂಸ್ಥೆಯು ಶೇಕಡ 50 ರಿಯಾಯಿತಿ ಘೋಷಿಸಿದೆ.

ಬೆಂಗಳೂರು(ಏ.24): ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮವಾರದಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ರಾಜಕುಮಾರ' ಚಿತ್ರದ ಪ್ರದರ್ಶನ ಶುಲ್ಕಕ್ಕೆ ಹೊಂಬಾಳೆ ಫಿಲಂಸ್‌ ಸಂಸ್ಥೆಯು ಶೇಕಡ 50 ರಿಯಾಯಿತಿ ಘೋಷಿಸಿದೆ.

‘ರಾಜಕುಮಾರ' ಚಿತ್ರ ಸದ್ಯ ಪ್ರದರ್ಶನ ಕಾಣುತ್ತಿರುವ ರಾಜ್ಯದ ಎಲ್ಲ ಸಿಂಗಲ್‌ ಚಿತ್ರಮಂದಿರಗಳಲ್ಲೂ ರಿಯಾಯಿತಿ ಲಭ್ಯವಿದೆ. ವರನಟ ರಾಜ್‌ಕುಮಾರ್‌ ಹಾಗೂ ಅವರ ಪುತ್ರ ಪವರ್‌ ಸ್ಟಾರ್‌ ಅಭಿಮಾನಿಗಳು ಸೇರಿದಂತೆ ಚಿತ್ರ ರಸಿಕರಿಗೆ ಇದು ಬಂಪರ್‌ ಕೊಡುಗೆ ಆಗಿದ್ದು, ಸೋಮವಾರಕ್ಕೆ ಮಾತ್ರ ಸೀಮಿತ. ಉಳಿದಂತೆ ಈ ಸೌಲಭ್ಯ ಮಲ್ಟಿಫ್ಲೆಕ್ಸ್‌ಗೆ ಅನ್ವಯಿಸುವುದಿಲ್ಲ.

ಸಂತೋಷ್‌ ಆನಂದರಾಮ್‌ ನಿರ್ದೇಶನದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಗೂ ಪ್ರಿಯಾ ಆನಂದ್‌ ಅಭಿ​ನ​ಯಿ​ಸಿರುವ ಈ ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

‘ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಕೂಡ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಚಿತ್ರ ತಂಡ ವರನಟನ ಹುಟ್ಟುಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಚಿತ್ರದ ಪ್ರದರ್ಶನಕ್ಕೆ ರಿಯಾಯಿತಿ ನೀಡುವ ಮೂಲಕ ಚಿತ್ರ ರಸಿಕರ ಮನೆ- ಮನ ತಲುಪಿಸಲು ಮುಂದಾಗಿದೆ. ಈ ನಿರ್ಧಾರದಲ್ಲಿ ಯಾವುದೇ ಗಿಮಿಕ್‌ ಇಲ್ಲ. ಈ ಚಿತ್ರ ನೋಡಿದವರೆಲ್ಲ ವರನಟ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. ಜತೆಗೆ ಮಕ್ಕಳು ತಮ್ಮ ತಂದೆ- ತಾಯಿಯವರನ್ನು ಹೇಗೆ ನೋಡಿ ಕೊಳ್ಳಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ಈ ಉದ್ದೇಶ ಜನರಿಗೆ ತಲುಪಬೇಕು. ಈ ಮೂಲಕ ಜನರು ಚಿತ್ರ ಮಂದಿರಕ್ಕೆ ಬಂದು ಚಿತ್ರ ನೋಡಬೇಕು ಎನ್ನುವ ಕಾರಣಕ್ಕಾಗಿ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ನಾವು ನೀಡುತ್ತಿರುವ ಸಣ್ಣ ಕೊಡುಗೆ ಇದಾಗಿದೆ' ಎಂದು ನಿರ್ದೇಶಕ ಸಂತೋಷ್‌ ಆನಂದರಾಮ್‌ ತಿಳಿಸಿದ್ದಾರೆ.

ನಂದನ ಪ್ಯಾಲೇಸ್'ನಲ್ಲಿ ಶೇ. 20 ರಿಯಾಯ್ತಿ

ಕನ್ನಡದ ಮೇರುನಟ ದಿವಂಗತ ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ನಂದನ ಪ್ಯಾಲೇಸ್‌ ವತಿಯಿಂದ ಗ್ರಾಹಕರಿಗೆ ಸೋಮವಾರ ಊಟದ ಮೇಲೆ ಶೇ.20ರಷ್ಟುರಿಯಾಯಿತಿ ನೀಡಲಾಗಿದೆ. ನಗರದಲ್ಲಿನ ಎಲ್ಲಾ ಶಾಖೆಗಳಲ್ಲಿಯೂ ಈ ಕೊಡುಗೆ ಲಭ್ಯ ಇದ್ದು, ಸ್ವಾದಿಷ್ಟಭೋಜನವನ್ನು ಜನತೆ ಸವಿಯಬಹುದಾಗಿದೆ. ರಾಜಾಜಿನಗರ, ಇಂದಿರಾನಗರ, ಕೋರಮಂಗಲ, ದೊಮ್ಮಲೂರು, ನ್ಯೂ ಬಿಇಎಲ್‌ ರಸ್ತೆ, ಮಾರತ್‌ಹಳ್ಳಿ, ಕೆ.ಆರ್‌.ಪುರ, ಬನ್ನೇರುಘಟ್ಟರಸ್ತೆ, ರಾಜರಾಜೇಶ್ವರಿ ನಗರ, ಜೆ.ಪಿ.ನಗರ, ಕಮ್ಮನಹಳ್ಳಿ, ನಾಗರಭಾವಿ, ಸಹಕಾರನಗರದಲ್ಲಿ ನಂದನ ಪ್ಯಾಲೇಸ್‌ ಶಾಖೆಗಳನ್ನು ಹೊಂದಿವೆ. ಜ.24ರಂದು (ಸೋಮವಾರ) ಡಾ.ರಾಜ್‌ಕುಮಾರ್‌ ಅವರ ಜನ್ಮ ದಿನದ ಪ್ರಯುಕ್ತ ಒಂದು ದಿನ ಮಾತ್ರ ಈ ರಿಯಾಯಿತಿಯನ್ನು ನಂದನ ಪ್ಯಾಲೇಸ್‌ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ 080-64444455ಗೆ ಸಂಪರ್ಕಿಸಬಹುದಾಗಿದೆ.