ನವದೆಹಲಿ[ಜು.23]: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಭಾನುವಾರಕ್ಕೆ 50 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಿಪೋರ್ಟ್‌ ಕಾರ್ಡ್‌ ಅನ್ನು ದೇಶದ ಜನರ ಮುಂದೆ ಇಟ್ಟಿದೆ. ಕ್ಷಿಪ್ರ ಪ್ರಗತಿಯ ಭರವಸೆಯಂತೆ ಈಗಾಗಲೇ ನುಡಿದಂತೆ ನಡೆಯುತ್ತಿದ್ದೇವೆ. ಮೋದಿ ಅವರ ಮೊದಲ ಅವಧಿಗೆ ಹೋಲಿಸಿದರೆ ಎರಡನೇ ಅವಧಿಯಲ್ಲಿ ಸುಧಾರಣೆ ಪ್ರಕ್ರಿಯೆಗಳ ವೇಗ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.

ಮೋದಿ ಸರ್ಕಾರದ ಸಾಧನೆಗಳು ಹಾಗೂ ರಿಪೋರ್ಟ್‌ ಕಾರ್ಡ್‌ ಅನ್ನು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸೋಮವಾರ ಬಿಡುಗಡೆಗೊಳಿಸಿದರು. ಎರಡನೇ ಅವಧಿಯ ಮೊದಲ 50 ದಿನಗಳಲ್ಲಿ ವೇಗ, ಕೌಶಲ್ಯ ಹಾಗೂ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು.

5 ಟ್ರಿಲಿಯನ್‌ ಆರ್ಥಿಕತೆಯ ಗುರಿಕೇವಲ ಕನಸಲ್ಲ. ಅದೊಂದು ಮಾರ್ಗಸೂಚಿ. ಎರಡನೇ ಅವಧಿಯಲ್ಲಿ ಮತ್ತಷ್ಟುಪರಿಣಾಮಕಾರಿ ಆಡಳಿತ ಲಭಿಸಲಿದೆ ಎಂಬುದನ್ನು ಮೊದಲ 50 ದಿನಗಳ ಆಡಳಿತ ತೋರಿಸಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಸರ್ಕಾರದ ಕೆಲಸವನ್ನು ಜನರು ನೋಡುತ್ತಿದ್ದಾರೆ ಎಂದರು.

ಪ್ರಮುಖ ಸಾಧನೆಗಳು

- ಪ್ರಧಾನಿ ಕಿಸಾನ್‌ ಯೋಜನೆಯಡಿ ಎಲ್ಲ ರೈತರಿಗೆ ವಾರ್ಷಿಕ 6 ಸಾವಿರ ರು. ನಗದು

- ಹಲವಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ 2ರಿಂದ 3 ಪಟ್ಟು ಏರಿಕೆ, 10 ಸಾವಿರ ರೈತ ಸಂಘಟನೆಗಳ ಸ್ಥಾಪನೆ

- ಸರ್ಕಾರಿ ಬ್ಯಾಂಕುಗಳಿಗೆ ಬಂಡವಾಳ ತುಂಬಲು 70 ಸಾವಿರ ಕೋಟಿ ರು.

- ಸ್ಟಾರ್ಟ್‌ಅಪ್‌ ಕಂಪನಿಗಳಿಗಾಗಿ ಶೀಘ್ರದಲ್ಲೇ ಪ್ರತ್ಯೇಕ ಟೀವಿ ಚಾನೆಲ್‌

- ಮೃತ ಯೋಧ ಹಾಗೂ ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ಸ್ಕಾಲರ್‌ಶಿಪ್‌

- ವ್ಯಾಪಾರಿಗಳಿಗೆ ಪಿಂಚಣಿ, ಮಧ್ಯಮವರ್ಗಕ್ಕೆ ತೆರಿಗೆ ವಿನಾಯಿತಿ, ಗೃಹ ಸಾಲದ ಬಡ್ಡಿಗೆ ತೆರಿಗೆ ವಿನಾಯಿತಿ

- ಆರ್ಥಿಕ ಅಪರಾಧಿಗಳ ಮೇಲೆ ಕ್ರಮ, ಅವರನ್ನು ವಾಪಸ್‌ ಕರೆತರಲು ಯತ್ನ

- ಜನರಿಗೆ ಮೋಸ ಮಾಡುವ ಹೂಡಿಕೆ ಯೋಜನೆಗಳ ಮಟ್ಟಹಾಕಲು ಮಸೂದೆ

- ಮಕ್ಕಳ ಮೈಲಿನ ಲೈಂಗಿಕ ಕಿರುಕುಳ ತಡೆಗೆ ಪೋಸ್ಕೋ ಕಾಯ್ದೆಗೆ ತಿದ್ದುಪಡಿ

- ವೈದ್ಯಕೀಯ ಶಿಕ್ಷಣದ ಸುಧಾರಣೆಗೆ ಕ್ರಮ