ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಊದಿದ ರಣಕಹಳೆಯಲ್ಲಿ ಅತಿ ದೊಡ್ಡ ತಪ್ಪಿತಸ್ಥರು ಬ್ಯಾಂಕ್​ನವರೇ. ಯಾವ ಬ್ಯಾಂಕ್ ಸಿಬ್ಬಂದಿಯನ್ನು ನಂಬಿಕೊಂಡು, ಮೋದಿ ಇಂಥಾದ್ದೊಂದು ಐತಿಹಾಸಿಕ ಹೆಜ್ಜೆಯಿಟ್ಟರೋ ಆ ಬ್ಯಾಂಕ್ ಸಿಬ್ಬಂದಿಯೇ ಕಾಳಧನಿಕರ ಕೈ ಜೋಡಿಸಿದರು. ಇನ್ನು ಉಳಿದಿರುವುದು ಕೇವಲ 8 ದಿನ. ಇಷ್ಟು ದಿನದಲ್ಲಿ ಬ್ಯಾಂಕ್ ಸಿಬ್ಬಂದಿ ಈ ಬ್ಲಾಕ್​ ಮನಿಯನ್ನು ಹೇಗೆ ವೈಟ್ ಮಾಡಿಕೊಟ್ಟರು ಅವರು ಬ್ಲಾಕ್​ ಮನಿಯನ್ನು ವೈಟ್ ಮಾಡಿಸಲು ಅನುಸರಿಸಿದ ಕಳ್ಳದಾರಿಯ ಕಥೆ ಇದು.

ನವದೆಹಲಿ(ಡಿ.23): ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಊದಿದ ರಣಕಹಳೆಯಲ್ಲಿ ಅತಿ ದೊಡ್ಡ ತಪ್ಪಿತಸ್ಥರು ಬ್ಯಾಂಕ್​ನವರೇ. ಯಾವ ಬ್ಯಾಂಕ್ ಸಿಬ್ಬಂದಿಯನ್ನು ನಂಬಿಕೊಂಡು, ಮೋದಿ ಇಂಥಾದ್ದೊಂದು ಐತಿಹಾಸಿಕ ಹೆಜ್ಜೆಯಿಟ್ಟರೋ ಆ ಬ್ಯಾಂಕ್ ಸಿಬ್ಬಂದಿಯೇ ಕಾಳಧನಿಕರ ಕೈ ಜೋಡಿಸಿದರು. ಇನ್ನು ಉಳಿದಿರುವುದು ಕೇವಲ 8 ದಿನ. ಇಷ್ಟು ದಿನದಲ್ಲಿ ಬ್ಯಾಂಕ್ ಸಿಬ್ಬಂದಿ ಈ ಬ್ಲಾಕ್​ ಮನಿಯನ್ನು ಹೇಗೆ ವೈಟ್ ಮಾಡಿಕೊಟ್ಟರು ಅವರು ಬ್ಲಾಕ್​ ಮನಿಯನ್ನು ವೈಟ್ ಮಾಡಿಸಲು ಅನುಸರಿಸಿದ ಕಳ್ಳದಾರಿಯ ಕಥೆ ಇದು.

ನವೆಂಬರ್​ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ನೋಟುಗಳು ಅಪನಗದೀಕರಣ ಅಂತ ಘೋಷಿಸಿದ ಮೇಲೆ ದೇಶದಲ್ಲಿ ಒಂಥರಾ ಆರ್ಥಿಕ ಎಮರ್ಜೆನ್ಸಿ ಕಂಡು ಬರುತ್ತಿದೆ. ಕೇಂದ್ರ ಸರ್ಕಾರ ಯಾರಿಗೆ ಬಿಸಿ ಮುಟ್ಟಿಸಬೇಕು ಅಂತ ಹೊರಟಿದೆಯೋ ಅವರು ಐದಾರಿ ಹಂತಗಳ ವಾಮಮಾರ್ಗಗಳ ಮೂಲಕ ತಪ್ಪಿಸಿಳ್ಳುತ್ತಿದ್ದಾರೆ.

ಬ್ಯಾಂಕ್​ ಕಳ್ಳಾಟ ನಂ. 1: ಬೇರೆ ಬೇರೆ ಗುರುತಿನ ಪತ್ರ ಬಳಸಿ ಬ್ಲಾಕ್ & ವೈಟ್

ರಿಸರ್ವ್​ ಬ್ಯಾಂಕ್'​ಗಳಿಂದ ಅಧೀನ ಬ್ಯಾಂಕ್'​ಗಳನ್ನು ತಲುಪುವ ಹೊಸ ನೋಟುಗಳನ್ನು ನಕಲಿ ದಾಖಲಾತಿಗಳನ್ನು ನೀಡಿ ಕೆಲ ಮಧ್ಯವರ್ತಿಗಳು ಅಥವಾ ಕಾಳಧನಿಕರು ಬದಲಾವಣೆ ಮಾಡಿಕೊಂಡರು. ವಿವಿಧ ರೀತಿಯ ಗುರುತಿನ ಚೀಟಿಗಳಾದ ಎಲೆಕ್ಷನ್ ಐಡಿ, ಪ್ಯಾನ್ ಕಾರ್ಡ್​ ಪಾಸ್​ ಪೋರ್ಟ್,​ ಆಧಾರ ಕಾರ್ಡ್ ಚೀಟಿ ಹೊಂದಿರುವ ಸಾರ್ವಜನಿಕರನ್ನು ದಂಧೆಕೋರರು ಬಳಸಿಕೊಂಡರು. ಸಾರ್ವಜನಿಕರಿಗೆ ಕಮಿಷನ್ ಆಸೆ ತೋರಿಸಿ ಬ್ಯಾಂಕ್'​ಗಳಿಗೆ ಅಲೆದಾಡಿಸಿ ಲಕ್ಷಾಂತರ ರೂಪಾಯಿ ಕಪ್ಪು ಹಣ ವೈಟ್ ಮಾಡಿಕೊಂಡರು. ಇದ್ರಿಂದ ಕಪ್ಪು ಕುಳಗಳು 2 ಸಾವಿರ ಮುಖಬೆಲೆಯ ಹೆಚ್ಚು ಹೆಚ್ಚು ನೋಟುಗಳು ಒಂದೇ ಕಡೆ ಶೇಖರಣೆ ಮಾಡಿಕೊಂಡರು.

ಬ್ಯಾಂಕ್​ ಕಳ್ಳದಾರಿ ನಂ. 2: ಬ್ಯಾಂಕ್ ಅಧಿಕಾರಿಗಳಿಂದಲೇ ಗ್ರಾಹಕರ ದಾಖಲೆ ದುರ್ಬಳಕೆ 

ಎರಡನೆಯ ಹಂತದಲ್ಲಿ ನಡೆದದ್ದು ಬೇರೆ. ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್'​ಗಳಲ್ಲಿರುವ ಹೊಸ ನೋಟುಗಳನ್ನು ಸಹಸ್ರಾರು ಖಾತೆದಾರರಿಗೆ ವಿತರಿಸಬೇಕು. ಆದರೆ, ಬ್ಯಾಂಕ್​ ಸಿಬ್ಬಂದಿ, ತಮ್ಮದೇ ಬ್ಯಾಂಕ್'​ನ ಗ್ರಾಹಕರ ಗುರುತಿನ ಚೀಟಿಗಳನ್ನ ಮಿಸ್​ಯೂಸ್ ಮಾಡಿಕೊಂಡರು. ಕಾನೂನು ಬದ್ದವಾಗಿಯೇ ಸಾರ್ವಜನಿಕರಿಗೆ ಹಣ ಬದಲಾಯಿಸಿದಂತೆ ದಾಖಲೆಗಳನ್ನು ಸೃಷ್ಟಿಸಿದರು. ಬ್ಯಾಂಕ್'​ನಲ್ಲಿರುವ ಬಳಕೆಯಲ್ಲಿಲ್ಲದ ಅಕೌಂಟ್​'ಗಳನ್ನು ಅಕ್ರಮವಾಗಿ ಲಾಭಕ್ಕೆ ಬಳಸಿಕೊಂಡರು.
ಇದರಿಂದಾಗಿ ಬ್ಯಾಂಕ್​'ನಲ್ಲಿದ್ದ ಪಿಂಕ್​ ನೋಟುಗಳು ಕಪ್ಪುಕುಳಗಳ ಖಜಾನೆ ಸೇರಿದವು.

ಇದನ್ನೂ ಓದಿ:

ಬ್ಯಾಂಕ್​ ಕಳ್ಳದಾರಿ ನಂ. 3: ಎಟಿಎಂ ಏಜೆನ್ಸಿಗಳ ಕಳ್ಳಾಟ 

ಮೂರನೇ ಹಂತದ ಕಳ್ಳದಾರಿಗೆ ಸಹಕರಿಸಿದ್ದು ಎಟಿಎಂ ಏಜೆನ್ಸಿಗಳು. ಎಟಿಎಂಗಳಿಗೆ ಹಣ ಹಾಕುವ ಕೆಲಸವನ್ನು ಕೆಲವು ಖಾಸಗಿ ಏಜೆನ್ಸಿಗಳು ಮಾಡುತ್ತವೆ. ಆದರೆ, ಎಟಿಎಂಗಳಿಗೆ ಬರಬೇಕಾದ ಹಣ, ಎಟಿಎಂಗಳಿಗೆ ಬರಲಿಲ್ಲ. 2 ಸಾವಿರ ಮುಖಬೆಲೆಯ ನೋಟುಗಳನ್ನು ಕಮೀಷನ್​ ಆಧಾರದ ಮೇಲೆ ಕಪ್ಪುಕುಳಗಳಿಗೆ ಕೊಟ್ಟರು.

ಬ್ಯಾಂಕ್​ ಕಳ್ಳದಾರಿ ನಂ. 4: ಫೈನಾನ್ಸ್ ಏಜೆನ್ಸಿಗಳ ಕಳ್ಳಾಟ

ನಾಲ್ಕನೇ ಹಂತದಲ್ಲಿ ಬ್ಲಾಕ್ & ವೈಟ್ ದಂಧೆ ನಡೆಸಿದ್ದು ಫೈನಾನ್ಸ್​ ಏಜೆನ್ಸಿಗಳು. ಈ ಏಜೆನ್ಸಿಗಳು ಪ್ರತಿದಿನ ಪಿಗ್ಮಿ ಕಲೆಕ್ಷನ್ ರೂಪದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತವೆ. ಗ್ರಾಹಕರಿಂದ ಈ ಏಜೆನ್ಸಿಗಳು ಪಡೆದಿದ್ದು ಹಳೆಯ 100, 50ರ ನೋಟುಗಳನ್ನ. ಬ್ಯಾಂಕುಗಳಿಗೆ ಡೆಪಾಸಿಟ್ ಮಾಡಿದ್ದು ಹಳೆಯ 500, 1000 ರೂ. ನೋಟುಗಳನ್ನು. ಹಾಗೆ ಡೆಪಾಸಿಟ್ ಮಾಡಿದ ಹಣವನ್ನ ವಾಪಸ್ ತೆಗೆದುಕೊಂಡಿದ್ದು ಹೊಸ ನೋಟುಗಳಲ್ಲಿ. ಇದೂ ಕೂಡಾ ಕಾನೂನು ಬದ್ಧವಾಗಿಯೇ ಆಯ್ತು.

ಬ್ಯಾಂಕ್​ ಕಳ್ಳದಾರಿ ನಂ. 5: ಉದ್ಯಮಿಗಳು ನೌಕರರನ್ನು ಕ್ಯೂ ನಿಲ್ಲಿಸಿ ದಂಧೆ

ಒಬ್ಬರಿಗೆ 4 ಸಾವಿರ ರೂ. ಬದಲಾವಣೆ ಮಿತಿಯಿತ್ತಲ್ಲ. ಅದನ್ನು ದುರ್ಬಳಕೆ ಮಾಡಿಕೊಂಡ ಕೆಲವು ಉದ್ಯಮಿಗಳು, ತಮ್ಮ ನೌಕರರನ್ನು ಕ್ಯೂ ನಿಲ್ಲಿಸಿದರು. ಅದರ ಬಗ್ಗೆ ಬ್ಯಾಂಕ್​ನವರಿಗೂ ಮಾಹಿತಿಯಿತ್ತು. ಅವರು ವೈಯಕ್ತಿಕವಾಗಿ ಹಣ ತೆಗೆದುಕೊಂಡು ಉದ್ಯಮಿಗಳಿಗೆ ಹಣ ರವಾನಿಸಿದರು. ದಾಖಲೆ ಪರಿಶೀಲಿಸಬೇಕಾದ ಬ್ಯಾಂಕ್ ಸಿಬ್ಬಂದಿ ಮೈಮರೆತರು ಅಥವಾ ಮೈಮರೆತಂತೆ ನಟಿಸಿದರು.

ನೋಡ ನೋಡುತ್ತಲೇ ಕಾಳಧನಿಕರ ಕೈಯ್ಯಲ್ಲಿ, ಖಜಾನೆಯಲ್ಲಿ, ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಹೊಸ ನೋಟುಗಳು ಸಿಕ್ಕಿಬಿದ್ದಿದ್ದು ಹೀಗೆ.