ಬೆಂಗಳೂರು (ಡಿ. 04):  ಡಿಸೆಂಬರ್‌ 11 ರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಮೋದಿ ಸಾಮ್ರಾಜ್ಯದಲ್ಲಿ ಲೆಕ್ಕಾಚಾರಗಳು ಶುರುವಾಗಿವೆ. 

ಎಷ್ಟು ರಾಜ್ಯಗಳಲ್ಲಿ ಗೆಲ್ಲಬಹುದು ಎಂಬ ವಿಚಾರದಲ್ಲಿ ಚಿಂತೆಯ ಗೆರೆಗಳು ಖಾಸಗಿ ಮಾತುಕತೆಯಲ್ಲಿ ವ್ಯಕ್ತವಾಗುತ್ತಿವೆ. ರಾಜಸ್ಥಾನದಲ್ಲಿ ಗೆಲ್ಲೋದು ಕಷ್ಟಎಂದು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಅನ್ನಿಸಿದೆಯಂತೆ. ಇನ್ನು ಛತ್ತೀಸ್‌ಗಢದಲ್ಲಿ ಒಂದು ಪ್ರತಿಶತ ಮತ ಆ ಕಡೆ ಈ ಕಡೆ ಆದರೂ ಕೂಡ ಎಲ್ಲವೂ ಏರುಪೇರಾಗಲಿದೆ.

ಹೀಗಾಗಿ ಬಿಜೆಪಿಗೆ ಲೋಕಸಭೆಯ ಫೈನಲ್ ಗೆ ಹೋಗುವುದಕ್ಕಿಂತ ಮುಂಚೆ ಉಳಿದಿರುವ ಏಕೈಕ ಆಸೆ ಮಧ್ಯಪ್ರದೇಶದ್ದು. 15 ವರ್ಷಗಳಿಂದ ಮಧ್ಯಪ್ರದೇಶವನ್ನು ಆಳುತ್ತಿರುವ ಬಿಜೆಪಿ ಬಗ್ಗೆ ಸಹಜವಾಗಿ ಮತದಾರರಲ್ಲಿ ಕೊಂಚ ವಿರೋಧಿ ಅಲೆ ಇದೆಯಾದರೂ, ಕಮಲ ಪಾಳೆಯಕ್ಕಿರುವ ದೊಡ್ಡ ಪ್ಲಸ್‌ ಪಾಯಿಂಟ್‌ ಗಟ್ಟಿಸಂಘಟನೆ. 

ಗುಜರಾತಿನಲ್ಲಿ ಕೂಡ ಸೋಲುವ ಪಂದ್ಯವನ್ನು ಮೋದಿ ಮತ್ತು ಶಾ ಕೊನೆಯ ಬಾಲ…ವರೆಗೆ ಸ್ವತಃ ತಾವೇ ನಿಂತು ಗೆದ್ದುಕೊಂಡಿದ್ದರು. ಮಧ್ಯಪ್ರದೇಶದಲ್ಲಿ ಕೂಡ ಬಿಜೆಪಿ, ಆರ್‌ಎಸ್‌ಎಸ್‌ ಎಲ್ಲಾ ಪ್ರಯತ್ನ ಹಾಕಿದ್ದರೂ ಕಳೆದ ಬಾರಿಗಿಂತ ಈ ಬಾರಿ ಮತದಾನದ ಪ್ರಮಾಣ ಜಾಸ್ತಿ ಆಗಿರುವುದು ದುಗುಡವನ್ನು ಹೆಚ್ಚಿಸಿದೆ. 2014ರಿಂದ ಆಡಿದ ಎಲ್ಲಾ ಮ್ಯಾಚುಗಳನ್ನೂ ಗೆದ್ದಿರುವ ಬಿಜೆಪಿಗೆ ಫೈನಲ್‌ಗಿಂತ ಮುಂಚಿನ ಸೆಮಿಫೈನಲ್‌ನಲ್ಲಿ ಗೆಲ್ಲುವುದು ಪ್ರತಿಷ್ಠೆ. ಸ್ವಲ್ಪ ಹೆಚ್ಚುಕಡಿಮೆ ಆದರೂ ಮೋದಿ ಸಾಹೇಬರ ದ್ವಿತೀಯ ದಂಡಯಾತ್ರೆಗೆ ಕರಿ ಮೋಡಗಳು ಆವರಿಸಿಕೊಳ್ಳಬಹುದು.

ಚುನಾವಣೆಯಲ್ಲಿ ಸೋಲುತ್ತಾರೋ, ಗೆಲ್ಲುತ್ತಾರೋ ಆದರೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಹೈದರಾಬಾದ್‌ನಿಂದ ಹಿಡಿದು ಜೈಪುರದವರೆಗೆ ಹಾಕುತ್ತಿರುವ ಸ್ವಂತ ಪರಿಶ್ರಮಕ್ಕೆ ಸದ್ಯದ ಸ್ಥಿತಿಯಲ್ಲಿ ಯಾವ ಪಕ್ಷ, ಯಾವ ರಾಜಕಾರಣಿಯೂ ಸಾಟಿಯಿಲ್ಲ. ಹೆಚ್ಚುಕಡಿಮೆ 50 ದಿನಗಳಿಂದ ದಿಲ್ಲಿಯಿಂದ ದೂರವೇ ಇರುವ ಅಮಿತ್‌ ಶಾ, ಮೊದಲು ಛತ್ತೀಸ್‌ಗಢ, ನಂತರ ಮಧ್ಯಪ್ರದೇಶ ಮತ್ತು ಈಗ ರಾಜಸ್ಥಾನದಲ್ಲಿ ತಾನೇ ಚುನಾವಣೆಯ ಕ್ಷೇತ್ರವಾರು ಪ್ರಬಂಧನ ನೋಡಿಕೊಂಡಿದ್ದಾರೆ.

ಆವತ್ತಿನಿಂದಲೂ ದಿಲ್ಲಿಯ ಇಡೀ ಬಿಜೆಪಿ ಕಾರ್ಯಾಲಯವೇ ರಾಜ್ಯಗಳಿಗೆ ಶಿಫ್ಟ್‌ ಆಗಿದೆ. ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ಧರ್ಮೇಂದ್ರ ಪ್ರಧಾನ್‌, ಜೆ ಪಿ ನಡ್ಡಾ, ಜಾವಡೇಕರ್‌, ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ… ಎಲ್ಲರಿಗೂ ಕೆಲಸ ಕೊಟ್ಟಿದ್ದು, ಯೋಗಿ ಆದಿತ್ಯನಾಥ್‌ ಕೂಡ ದಿನವೂ ಲಖನೌನಿಂದ ಬಂದು ಹೋಗುತ್ತಿದ್ದಾರೆ.

ಇಷ್ಟೆಲ್ಲದರ ಮೇಲೆ ಕರ್ನಾಟಕದಲ್ಲಿ ಮಾಡಿದಂತೆ ಕೊನೆಯ ಹತ್ತು ದಿನ ಮೋದಿಯವರ ಭರ್ಜರಿ ಪ್ರಚಾರ. 2014ರ ನಂತರ ನಡೆದ ಚುನಾವಣೆಗಳಲ್ಲಿ ಅಸ್ಸಾಂ, ಮಹಾರಾಷ್ಟ್ರ, ಜಾರ್ಖಂಡ್‌, ಯುಪಿ, ಹರ್ಯಾಣ, ಕರ್ನಾಟಕಗಳಲ್ಲಿ ಬಿಜೆಪಿ ವಿರೋಧಿ ಸರ್ಕಾರಗಳಿದ್ದವು. ಆದರೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದು, ಆಡಳಿತ ವಿರೋಧಿ ಅಲೆಯನ್ನೂ ಮೋದಿ ಪ್ರೀತಿ ಕೊಚ್ಚಿಹಾಕುತ್ತಾ ಎಂಬ ಕುತೂಹಲಕ್ಕೆ ಇನ್ನೊಂದು ವಾರ ಕಾಯಬೇಕು.

ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ, ರಾಜಸ್ಥಾನ ಹಾಗೂ  ಚತ್ತಿಸ್ ಗಡ್ ಗೆ ಚುನಾವಣೆ ನಡೆದಿತ್ತು. ಡಿಸಂಬರ್ 11 ರಂದು ಫಲಿತಾಂಶ ಹೊರ ಬೀಳಲಿದೆ.  ಮಧ್ಯಪ್ರದೇಶ, ರಾಜಸ್ತಾನ, ಮಿಜೋರಾಂ ಮತ್ತು ತೆಲಂಗಾಣ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ.  

ಛತ್ತಿಸ್ ಗಡ್ ದಲ್ಲಿ 18 ಕ್ಷೇತ್ರಗಳಿಗೆ ನ. 12 ರಂದು ಮೊದಲ ಹಂತದ ಚುನಾವಣೆ ನಡೆದರೆ ಇನ್ನುಳಿದ 72 ಕ್ಷೇತ್ರಗಳಿಗೆ ನ. 20 ರಂದು ನಡೆದಿದೆ.  ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನ. 28 ರಂದು ಹಾಗೂ ರಾಜಸ್ತಾನ, ತೆಲಂಗಾಣದಲ್ಲಿ ಡಿ. 07 ರಂದು ಚುನಾವಣೆ ನಡೆದಿದೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ