Asianet Suvarna News Asianet Suvarna News

ದೇಶದ ಎಲ್ಲೇ ಕನ್ನಡದಲ್ಲಿ ಓದಿದ್ದರೂ ನೌಕರಿಯಲ್ಲಿ ಶೇ.5 ರಷ್ಟು ಮೀಸಲು

ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಲಭ್ಯವಿರುವ ಶೇ.೫ರಷ್ಟು ಮೀಸಲಾತಿ ಸೌಲಭ್ಯ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಯಾವುದೇ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪಡೆದವರಿಗೂ ದೊರೆಯುತ್ತದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

5 Percent Reservation For Kannada Medium Student in Jobs
  • Facebook
  • Twitter
  • Whatsapp
ಬೆಂಗಳೂರು (ಜು.06): ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಲಭ್ಯವಿರುವ ಶೇ.೫ರಷ್ಟು ಮೀಸಲಾತಿ ಸೌಲಭ್ಯ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಯಾವುದೇ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪಡೆದವರಿಗೂ ದೊರೆಯುತ್ತದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
 
ವಾಸ್ತವವಾಗಿ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಮಾತ್ರ ಸರ್ಕಾರಿ ಉದ್ಯೋಗದ ನೇರ ನೇಮಕಾತಿ ವೇಳೆ ಶೇ.೫ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಈ ಸೌಲಭ್ಯ ಕರ್ನಾಟಕದಲ್ಲಿ ಮಾತ್ರ ವ್ಯಾಸಂಗ ಮಾಡಿದವರಿಗೆ ನೀಡಬೇಕೋ ಅಥವಾ ದೇಶದ ಯಾವುದೇ ಭಾಗದಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೂ ನೀಡಬೇಕೋ ಎಂಬ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಈ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಈ ಮೀಸಲಾತಿ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
 
ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಮೀಸಲಾತಿಯನ್ನು ಪಡೆಯಲು ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿಗಿಂತಲೂ ಹೆಚ್ಚಿನ ವಿದ್ಯಾಭ್ಯಾಸ ನಿಗದಿಪಡಿಸಿದ್ದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕಾಗುತ್ತದೆ. ಹಾಗೂ ಎಸ್‌ಎಸ್‌ಎಲ್‌ಸಿಗಿಂತಲೂ ಕಡಿಮೆ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆ (ತರಗತಿ)ವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
 
ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳ ಮೀಸಲಾತಿಯಡಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಾಗ ಸೂಚಿಸಿದ ಅಂಶಗಳನ್ನು ಪರಿಗಣಿಸಬೇಕೆಂದು ಆಯ್ಕೆ/ನೇಮಕಾತಿ ಪ್ರಾಧಿಕಾರಗಳಿಗೆ ಇಲಾಖೆ ಸೂಚಿಸಿದೆ.

 

Follow Us:
Download App:
  • android
  • ios