ಪತ್ರಕರ್ತರಿಗೆ 5 ಲಕ್ಷ ರು. ಆರೋಗ್ಯ ವಿಮೆ

First Published 21, Jul 2018, 11:11 AM IST
5 Lakh Health Insurance For Journalist Says
Highlights

ಪತ್ರಕರ್ತರಿಗೆ ಮತ್ತು ಅವರ  ಕುಟುಂಬದವರಿಗಾಗಿ ಆರೋಗ್ಯ ನಿಧಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಅಪಘಾತದಲ್ಲಿ ಮಡಿದರೆ ನೆರವಾಗಲು 50 ಲಕ್ಷ ರು.ಮೀಸಲಿರಿಸಲಾಗುವುದು ಎಂದು ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ. 

ಮೈಸೂರು: ಪತ್ರಕರ್ತರಿಗೆ ಮತ್ತು ಅವರ  ಕುಟುಂಬ ದವರಿಗಾಗಿ ಆರೋಗ್ಯ ನಿಧಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪತ್ರಕರ್ತರು ಮತ್ತವರ ಕುಟುಂಬಕ್ಕೆ 5 ಲಕ್ಷ ಮೌಲ್ಯದ ಆರೋಗ್ಯ ಪರಿಹಾರ ಮತ್ತು ಅಪಘಾತದಲ್ಲಿ ಮಡಿದವರಿಗೆ ಸಹಾಯಹಸ್ತ ಚಾಚುವುದಕ್ಕಾಗಿ 50  ಲಕ್ಷ ಮೌಲ್ಯದ ಸಂತ್ರಸ್ತ ನಿಧಿ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಈ ವಿಷಯವನ್ನು ಮೈಸೂರಿನ ಕಾರ್ಯಕ್ರಮವೊಂದರಲ್ಲೂ ಪುನರುಚ್ಚರಿಸಿದ ಸಚಿವರು, ಪತ್ರಕರ್ತರ ಆರೋಗ್ಯ ನಿಧಿ ಸ್ಥಾಪಿಸುವ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಯಾರೇ ತಪ್ಪು ಮಾಡಿದರೆ ಅದನ್ನು ಬರೆದು ತಿದ್ದುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ನೀವು ನನ್ನ ಬಗ್ಗೆ ಏನೇ ಬರೆದಾಗಲೂ ನಾನು ಬೇಜಾರು ಮಾಡಿಕೊಂಡಿಲ್ಲ. 

ತಪ್ಪನ್ನು ತಿಳಿಸಿದಾಗ ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ ಎಂದರು. ಹಲವು ವರ್ಷಗಳಿಂದ ಪತ್ರಕರ್ತರಿಗೆ ಆರೋಗ್ಯ ನಿಧಿ ಪ್ರಾರಂಭಿಸುವಂತೆ ಬೇಡಿಕೆ ಇತ್ತು. ಆದರೆ ಯಾವುದೇ ಸರ್ಕಾರ ಆರೋಗ್ಯ ನಿಧಿಯನ್ನು ಸ್ಥಾಪಿಸಿರಲಿಲ್ಲ. ಆದರೆ, ಇದೀಗ ಸಚಿವರು ಈ ಕುರಿತು ಟ್ವೀಟ್ ಮಾಡಿರುವುದು ಹಾಗೂ ಮಾತನಾಡಿರುವುದು ಪತ್ರಕರ್ತರಲ್ಲಿ ಸಂತೋಷ ತಂದಿದೆ.

loader