5 ಕೋಟಿ ಜನರಿಗೆ ಎಲ್ ಪಿಜಿ ಸಂಪರ್ಕ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 8:21 AM IST
5 crore new LPG connections provided
Highlights

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 5 ಕೋಟಿ ಗ್ಯಾಸ್ ಸಂಪರ್ಕ ಒದಗಿಸಿದ್ದು ಇದರಿಂದ 8 ತಿಂಗಳ ಮುಂಚಿತವಾಗಿ ತನ್ನ ಗುರಿ ತಲುಪಿದೆ. 

ನವದೆಹಲಿ: ಸಾಮಾಜಿಕ ಮತ್ತು ಆರ್ಥಿಕವಾಗಿ ಬಡತನದ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯ ಒದಗಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ 5 ಕೋಟಿ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದೆ. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಹಿಳೆಯೊಬ್ಬರಿಗೆ ಎಲ್‌ಪಿಜಿ ಕಿಟ್ ವಿತರಿಸುವ ಮೂಲಕ ಈ ಸಾಧನೆಗೆ ಸಾಕ್ಷಿಯಾದರು. 

ವಿಶೇಷವೆಂದರೆ 8 ತಿಂಗಳ ಮುಂಚಿತವಾಗಿಯೇ ಕೇಂದ್ರ ಸರ್ಕಾರ ತನ್ನ ನಿರ್ದಿಷ್ಟ ಗುರಿಯನ್ನು ಪೂರೈಸಿದೆ. 2016 ರ ಏಪ್ರಿಲ್‌ನಲ್ಲಿ  ಆರಂಭಿಸಲಾಗಿದ್ದ ಉಜ್ವಲ ಗ್ಯಾಸ್ ಯೋಜನೆಯಡಿ 2019 ರ ಏಪ್ರಿಲ್ ವೇಳೆಗೆ ೫ ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯ ಕಲ್ಪಿಸಬೇಕೆಂದು ನಿರ್ಧರಿಸಲಾಗಿತ್ತು.  

ಆದರೆ, ಈ ಗಡುವಿಗೆ ಇನ್ನೂ ೮ ತಿಂಗಳು ಇರುವ ಮುಂಚಿತವಾಗಿಯೇ ಕೇಂದ್ರ ತನ್ನ ಗುರಿಯನ್ನು ತಲುಪಿದೆ. ಇದೇ ವೇಳೆ ಈ ಯೋಜನೆಯ ಫಲಾನುಭವಿಗಳಿಗೆ 2020 ರ ವೇಳೆಗೆ 3 ಕೋಟಿ ಹೆಚ್ಚುವರಿ  ಸಿಲಿಂಡರ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರವು, ಪ್ರತಿ ಸಿಲಿಂಡರ್ ಕಿಟ್‌ಗೆ ತಲಾ 1600 ರು.ನಂತೆ ತೈಲ ಕಂಪನಿಗಳಿಗೆ ಹಣ ನೀಡುತ್ತದೆ. 

ತೈಲ  ಕಂಪನಿಗಳು ಗ್ರಾಮೀಣ ಭಾಗದ ಅರ್ಹ ಬಡವರಿಗೆ ಇದನ್ನು ಉಚಿತವಾಗಿ ವಿತರಿಸುತ್ತವೆ. ಸ್ಟೌವ್ ಅನ್ನು ಗ್ರಾಹಕರೇ ಖರೀದಿಸಬೇಕಿರುತ್ತದೆ. ಆದರೆ ಈ ಸ್ಟೌವ್ ಹಣ ಮತ್ತು ಮೊದಲ ಎಲ್‌ಪಿಜಿ ಭರ್ತಿ ಮಾಡಿ ಹಣವನ್ನು ಕಂತಿನಲ್ಲಿ ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಈ ಯೋಜನೆಯ ಸಾಕಾರಕ್ಕಾಗಿ ಅಗತ್ಯವಿಲ್ಲದವರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಮೋದಿ ಅವರು ಮನವಿ ಮಾಡಿದ್ದರು. ಇದಕ್ಕೆ ಶೇ.4ರಷ್ಟು ಮಂದಿ ಪ್ರತಿಕ್ರಿಯಿಸಿ, ತಮ್ಮ ಸಬ್ಸಿಡಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು. 

ಈ ಉಜ್ವಲ ಯೋಜನೆ ಪರಿಣಾಮದಿಂದಾಗಿ ಈ ಹಿಂದೆ ಶೇ.62 ರಷ್ಟು ಮಂದಿಯಿದ್ದ ಎಲ್‌ಪಿಜಿ ಸಂಪರ್ಕ ಹೊಂದಿದವರ ಸಂಖ್ಯೆ ಇದೀಗ ಶೇ.೮೦ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ತನ್ನ ದಾಖಲೆಗಳಿಂದ ತಿಳಿದುಬಂದಿದೆ. 

loader