- ಮಹಿಳೆಯರು ಅಹ್ಮದಾಬಾದ್‌ನಲ್ಲಿ ಆಟೋ ಓಡಿಸುವುದು ಕಡಿಮೆ- ಮಗಳ ಶಿಕ್ಷಣಕ್ಕಾಗಿ ಇ ರಿಕ್ಷಾ ಓಡಿಸಲು ಆರಂಭಿಸಿದ 45 ವರ್ಷದ ಮಹಿಳೆ
ಅಹ್ಮದಾಬಾದ್: ಎಲ್ಲ ಸಾಮಾಜಿಕ ಕಟ್ಟುಪಾಡುಗಳನ್ನು ಬದಿಗಿಟ್ಟು 45 ವರ್ಷದ ಈ ಮಹಿಳೆ ಮಗಳ ಶಿಕ್ಷಣಕ್ಕಾಗಿ ಆಟೋ ರಿಕ್ಷಾ ಚಲಿಸುತ್ತಿದ್ದಾಳೆ.
ಸೋನಾಲ್ಬೇನ್ ಜೋಧಾ ಆಟೋ ರಿಕ್ಷಾ ಓಡಿಸುತ್ತಿರುವ ಮಹಿಳೆ. ಜೋಧಾ ಮುಖದಲ್ಲಿ ನಗು ಮರೆಯಾಗುವುದೇ ಇಲ್ಲ. ಆ ಕಾರಣದಿಂದಲೇ ಈ ಮಹಿಳೆಗೆ ಯಾವತ್ತೂ ಪ್ರಯಾಣಿಕರು ಕಡಿಮೆಯಾಗುವುದೂ ಇಲ್ಲ.
ಸಖಿ ಗ್ರೂಪ್ ಎಂಬ ಎನ್ಜಿಒನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜೋಧಾ ಕಳೆದ ಕೆಲವು ವರ್ಷಗಳಿಂದ ಹಪ್ಪಳ ಮಾಡುತ್ತಿದ್ದಾರೆ. ಇತ್ತೀಚೆಗೆ ಹಸಿರು ನಗರ ಮಾಡುವ ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಇ-ರಿಕ್ಷಾ ಪಡೆಯಲು ಸಾಲ ಸಿಗುತ್ತದೆ ಎಂಬುದನ್ನು ಅರಿತ ಜೋಧಾ, ಆಟೋ ಕೊಂಡರು. ಅಷ್ಟೇ ಅಲ್ಲ, ಆಟೋ ಓಡಿಸಲು ತರಬೇತು ಪಡೆದಿದ್ದಲ್ಲದೇ, ಎನ್ಜಿಒ ನೆರವಿನಿಂದ ಚಾಲನಾ ಪರವಾನಗಿಯನ್ನೂ ಪಡೆದರು.
ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಅಸರ್ವಾದಿಂದ ಶಾಹೀಬಾಗ್ವರೆಗೆ ರಿಕ್ಷಾ ಓಡಿಸುವ ಜೋಧಾ ದಿನಕ್ಕೆ 1200 ದುಡಿಯುತ್ತಾರಂತೆ. ಅಷ್ಟೇ ಅಲ್ಲ ರಾತ್ರಿ ಒಂಬತ್ತವರೆಗೆ ಹಪ್ಪಳ ಮಾಡುವ ಕಾಯಕವನ್ನೂ ಮಾಡುತ್ತಾರೆ. ಪತಿ, ಮಗ ದುಡಿದರೂ ಸಂಸಾರ ದೂಗಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕೆಲಸವನ್ನೂ ಮಾಡಲು ಆರಂಭಿಸಿದೆ, ಎನ್ನುತ್ತಾರೆ ಜೋಧಾ. ನರ್ಸಿಂಗ್ ಓದುತ್ತಿರುವ ಮಗಳ ಶಿಕ್ಷಣಕ್ಕಾಗಿ ಜೋಧಾ ಇಷ್ಟು ಶ್ರಮ ವಹಿಸಿ, ಕೆಲಸ ಮಾಡುವುದಂತೆ. ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವ ತೃಪ್ತಿ ಜೋಧಾಗೆ.
ಕೆಲಸ ಮಾಡುವ ಮನಸ್ಸೊಂದಿದ್ದರೆ ಬೇಕಾದಷ್ಟು ಉದ್ಯೋಗ ಸಿಗುತ್ತದೆ ಎನ್ನುವುದಕ್ಕೆ ಜೋಧಾರೇ ಸಾಕ್ಷಿ.
PHOTO and CONTENT COURTESY: DNA
