ನವದೆಹಲಿ[ಡಿ.05]: ಹಾಲಿ/ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 4122 ಕ್ರಿಮಿನಲ್‌ ಕೇಸುಗಳು ವಿಚಾರಣೆಗೆ ಬಾಕಿ ಉಳಿದಿದೆ ಎಂದು ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ವರದಿಯೊಂದರಲ್ಲಿ ಹೇಳಲಾಗಿದೆ. ಈ ವರದಿ ಅನ್ವಯ 992 ಪ್ರಕರಣಗಳೊಂದಿಗೆ ಉತ್ತರಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದ ರಾಜಕಾರಣಿಗಳ ವಿರುದ್ಧ 161 ಪ್ರಕರಣಗಳು ಇವೆ. ಈ ಪೈಕಿ ನಾಲ್ವರು ಹಾಲಿ ಸಂಸದರು ಹಾಗೂ 95 ಹಾಲಿ ಶಾಸಕರು ಇದ್ದಾರೆ.

ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ರಾಜಕಾರಣಿಗಳನ್ನು ಆಜೀವ ಪರ‍್ಯಂತ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸಬೇಕು ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯದ ಮಿತ್ರ (ಅಮೀಕಸ್‌ ಕ್ಯೂರಿ) ಆಗಿರುವ ಹಿರಿಯ ನ್ಯಾಯವಾದಿ ವಿಜಯ್‌ ಹನ್ಸಾರಿಯಾ ಅವರು ಈ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಹಿಂದಿನ ವಿಚಾರಣೆ ವೇಳೆ, ಹಾಲಿ ಶಾಸಕರು, ಸಂಸದರು ಹಾಗೂ ಮಾಜಿಗಳ ವಿರುದ್ಧ ವಿವಿಧ ರಾಜ್ಯಗಳು ಹಾಗೂ ಹೈಕೋರ್ಟ್‌ಗಳಲ್ಲಿರುವ ಬಾಕಿ ಪ್ರಕರಣಗಳ ಕುರಿತಂತೆ ಮಾಹಿತಿಯನ್ನು ನ್ಯಾಯಾಲಯ ಕೇಳಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಹಾಗೂ ಕೆ.ಎಂ. ಜೋಸೆಫ್‌ ಅವರಿದ್ದ ಪೀಠಕ್ಕೆ ಮಂಗಳವಾರ ವರದಿಯನ್ನು ಸಲ್ಲಿಸಲಾಗಿದೆ.

ಈ ವರದಿಯಲ್ಲಿ ಕರ್ನಾಟಕದ ಘಟಾನುಘಟಿ ರಾಜಕಾರಣಿಗಳ ಹೆಸರೂ ಇದೆ. ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ, ಸಿ.ಪಿ. ಯೋಗೇಶ್ವರ್‌, ಬಿ.ಪಿ. ಆನಂದ ಕುಮಾರ್‌ (ಅಲಿಯಾಸ್‌ ಆನಂದ ಸಿಂಗ್‌), ಹಾಲಿ ಶಾಸಕ ನಾಗೇಂದ್ರ, ಮಾಜಿ ಶಾಸಕ ಎಸ್‌.ಕೆ. ಸಾಲಿ ಅವರ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಬಹುದಾಂತಹ ಪ್ರಕರಣಗಳು ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

4122 ಕ್ರಿಮಿನಲ್‌ ರಾಜಕಾರಣಿಗಳು:

ದೇಶದ ಹಾಲಿ ಶಾಸಕರು, ಸಂಸದರು ಹಾಗೂ ಮಾಜಿಗಳ ವಿರುದ್ಧ ಒಟ್ಟಾರೆ 4122 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ. ಈ ಪೈಕಿ ಹಾಲಿಗಳ ವಿರುದ್ಧ ವಿಚಾರಣೆಗೆ ಕಾದಿರುವ ಪ್ರಕರಣಗಳ ಸಂಖ್ಯೆ 2324. ಕೆಲವೊಂದು ಪ್ರಕರಣಗಳು ಮೂರು ದಶಕಗಳಾದರೂ ಇತ್ಯರ್ಥವಾಗಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಪೈಕಿ 430 ಕೇಸುಗಳು ಆರೋಪ ಸಾಬೀತಾದಲ್ಲಿ ಗಲ್ಲು ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಗಂಭೀರ ಪ್ರಕರಣಗಳು ಎಂದು ಹೇಳಲಾಗಿದೆ.

ಕೋರ್ಟ್‌ ಸೂಚನೆ

ಈ ವರದಿ ಪರಿಶೀಲಿಸಿದ ಸುಪ್ರೀಂಕೋರ್ಟ್‌, ಕೇರಳ ಮತ್ತು ಬಿಹಾರದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಜನಪ್ರತಿನಿಧಿಗಳ ವಿಚಾರಣೆಗೆಂದೇ ಪ್ರತ್ಯೇಕ ಕೋರ್ಟ್‌ ಸ್ಥಾಪಿಸುವಂತೆ ಕೋರ್ಟ್‌ ಸೂಚಿಸಿತು. ಆದರೆ ಉಳಿದ ರಾಜ್ಯಗಳಲ್ಲಿ ಹಾಲಿ ಹಾಗೂ ಮಾಜಿ ಸಂಸದ, ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸಲು ಹೈಕೋರ್ಟ್‌ಗಳು ನಿರ್ದಿಷ್ಟನ್ಯಾಯಾಲಯಗಳಿಗೆ ಸೂಚನೆ ನೀಡಬೇಕು. ಎಲ್ಲ ಪ್ರಕರಣಗಳನ್ನೂ ಒಂದೇ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವುದು ಬೇಡ ಎಂದು ಹೇಳಿದೆ. ಜೊತೆಗೆ ಗಲ್ಲು, ಜೀವಾವಧಿ ಶಿಕ್ಷೆ ವಿಧಿಸಿಬಹುದಾದ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆಗೆ ಸ್ವೀಕರಿಸಬೇಕು ಎಂದು ಸೂಚಿಸಿತು.

ರಾಜ್ಯದವರ ವಿರುದ್ಧ ಒಟ್ಟು 161 ಪ್ರಕರಣ:

ಕರ್ನಾಟಕದ ರಾಜಕಾರಣಿಗಳ ವಿರುದ್ಧ ಒಟ್ಟು 161 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಹಾಲಿ ಸಂಸದರ ವಿರುದ್ಧ 4, ಹಾಲಿ ಶಾಸಕರ ವಿರುದ್ಧ 95, ಮಾಜಿ ಸಂಸದರ ವಿರುದ್ಧ 2, ಮಾಜಿ ಶಾಸಕರ ವಿರುದ್ಧ 60 ಪ್ರಕರಣಗಳು ಇವೆ. 161 ಪ್ರಕರಣಗಳ ಪೈಕಿ 40 ಪ್ರಕರಣಗಳಿಗೆ ಕೋರ್ಟುಗಳ ತಡೆ ಇವೆ. ಜಿಲ್ಲಾ ಕೋರ್ಟುಗಳಲ್ಲಿ 18, ಸೆಷನ್ಸ್‌ ಕೋರ್ಟುಗಳಲ್ಲಿ 80, ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಗಳಲ್ಲಿ 81 ಪ್ರಕರಣಗಳು ಇವೆ.