ಬೆಂಗಳೂರು : ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣ ಸಮೀಪ  ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 40 ನಿಮಿಷಗಳ ಕಾಲ ನಮ್ಮ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಸಾವಿರಾರು ಪ್ರಯಾಣಿಕರು ಪರದಾಡಿದರು. ಸೋಮವಾರ ಬೆಳಗ್ಗೆ 10.18ರ ಸುಮಾರಿಗೆ ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತ್ತು. 

ಇದರಿಂದಾಗಿ ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರ ಹೋಗುವ ಮತ್ತು ಒಳಬರುವ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಮೆಟ್ರೊ ರೈಲಿನ ಆರು ಟ್ರಿಪ್‌ಗಳು ರದ್ದುಗೊಂಡಿದ್ದವು. ಈ ವಿಷಯ ತಿಳಿಯದ ನೂರಾರು ಮಂದಿ ಮೆಟ್ರೊ ಪ್ರಯಾಣಿಕರು ಇಂದಿರಾನಗರ, ಬೈಯಪ್ಪನಹಳ್ಳಿ, ಎಂ.ಜಿ.ರಸ್ತೆ ಇತ್ಯಾದಿ ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಗೊಂದಲ ನಿರ್ಮಾಣ: ನೂರಾರು ಪ್ರಯಾಣಿಕರು ಮೆಟ್ರೊ ನಿಲ್ದಾಣಗಳಲ್ಲಿ ಜಮಾವಣೆಗೊಂಡಿದ್ದರಿಂದ ಗೊಂದಲ  ನಿರ್ಮಾಣ ಗೊಂಡಿತು. ಕೂಡಲೇ ಮೆಟ್ರೊ ಸಿಬ್ಬಂದಿ ತಾಂತ್ರಿಕ ಅವ್ಯವಸ್ಥೆ ಕುರಿತು ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಟ್ಟು, ಸಹಕರಿಸುವಂತೆ ನಿರಂತರವಾಗಿ ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. ಮೆಟ್ರೊ ಸೇವೆ ಸ್ಥಗಿತದ ಕಾರಣ ಅನೇಕ ಪ್ರಯಾಣಿಕರು ಆಟೋ, ಟ್ಯಾಕ್ಸಿ, ಬಿಎಂಟಿಸಿ ಬಸ್ ಗಳ ಮೊರೆ ಹೋದರು. ಸಿಗ್ನಲಿಂಗ್ ವ್ಯವಸ್ಥೆಯನ್ನು ಯಾಂತ್ರಿಕವಾಗಿ ಸರಿಪಡಿಸಿದ ಬಳಿಕ 10.57ರಿಂದ ರೈಲು ಸಂಚಾರ ಪುನರ್ ಆರಂಭಗೊಂಡಿತ್ತು. 

ಬೈಯಪ್ಪನಹಳ್ಳಿ ನಿಲ್ದಾಣದ ಸ್ವಲ್ಪ ದೂರ ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಸುಮಾರು 158 ಪ್ರಯಾಣಿಕರನ್ನು ರೈಲು ಸಂಖ್ಯೆ 21 ರಿಂದ ಪಾದಚಾರಿ ಮಾರ್ಗದ ಮೂಲಕ ಬೈಯಪ್ಪನಹಳ್ಳಿ ಪ್ಲಾಟ್ ಫಾರಂಗೆ ಸುರಕ್ಷಿತವಾಗಿ ಮೆಟ್ರೊ ಸಿಬ್ಬಂದಿ ಕಳುಹಿಸಿಕೊಟ್ಟರು. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ರೈಲು ಸ್ಥಗಿತಗೊಂಡಿದ್ದರಿಂದ ಒಂದು ರೈಲು ಸ್ವಾಮಿ ವಿವೇಕಾನಂದ ರೈಲು ನಿಲ್ದಾಣದಲ್ಲಿ ಹಾಗೂ ಎರಡು ಇಂದಿರಾನಗರ ನಿಲ್ದಾಣದಲ್ಲಿ ನಿಲ್ಲಬೇಕಾಯಿತು.