ಲಕ್ನೋ[ಮೇ.30]: ಉತ್ತರ ಪ್ರದೇಶದ ಆಲೀಗಢದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದ್ದು, ಫಿರೋಜ್ ಆಲಂ ಎಂಬಾತನನ್ನು MBA ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಆರೋಪದಡಿಯಲ್ಲಿ ಬಂಧಿಸಲಾಗಿದೆ. BSP ನಾಯಕನಾಗಿರುವ ಫಿರೋಜ್ ಆಲಂ ತನ್ನ ಪ್ರಿಯತಮೆಯನ್ನು ಟಾಪರ್ ಆಗಿಸಲು ಪ್ರಶ್ನೆಪತ್ರಿಕೆ ಲೀಕ್ ಮಾಡಲು ಸಜ್ಜಾಗಿದ್ದ ಎನ್ನಲಾಗಿದೆ. 

ಫಿರೋಜ್ ಆಲಂ, ರಾಜಾ ಎಂದೇ ಫೇಮಸ್. ಈತನ ಪ್ರಿಯತಮೆ ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ MBA ವ್ಯಾಸಂಗ ನಡೆಸುತ್ತಿದ್ದಾರೆ. ಈಕೆಗೆ ಸಹಾಯ ಮಾಡಲು ಫಿರೋಜ್ ಆಲಂ ಮುಸ್ಲಿಂ ವಿಶ್ವವಿದ್ಯಾನಿಲಯದ ಸಿಬ್ಬಂದಿ ಇರ್ಶಾದ್ ಗೆ ಕೆಲಸ ಖಾಯಂಗೊಳಿಸುವ ಭರವಸೆ ನೀಡಿ ಪೇಪರ್ ಲೀಕ್ ಮಾಡಿಸಲು ಸಜ್ಜಾಗಿದ್ದ.

ಫಿರೋಜ್ ತನ್ನ ಗರ್ಲ್ ಫ್ರೆಂಡ್ ಗೆ ಪರೀಕ್ಷಾ ಪ್ರಶ್ನೆ ಪತ್ರಿಕೆ ತಂದುಕೊಡುವುದಾಗಿ ಮಾತು ಕೊಟ್ಟಿದ್ದ. ಆಕೆಯನ್ನು ಖುಷಿಪಡಿಸಲು ನಕಲಿ ಪ್ರಶ್ನೆಪತ್ರಿಕೆ ತಂದುಕೊಟ್ಟಿದ್ದ. ಆದರೆ ಇದು ಫೇಕ್ ಎಂದು ತಿಳಿದಾಗ ಪ್ರಿಯತಮೆ ಫಿರೋಜ್ ಜೊತೆ ಜಗಳವಾಡಿದ್ದಳು. ಹೀಗಾಗಿ ಬೆರೆ ವಿಧಿ ಇಲ್ಲದ ಫಿರೋಜ್ ಪ್ರಶ್ನೆಪತ್ರಿಕೆ ಕದಿಯಲು ಯೋಜನೆ ರೂಪಿಸಿದ್ದ. 

ಇದರ ಅನ್ವಯ ತನ್ನ ಗೆಳೆಯನ ಮೂಲಕ ಇರ್ಶಾದ್ ಸ್ನೇಹ ಬೆಳೆಸಿ, ಆತನಿಗೆ ಆಮಿಷವೊಡ್ಡಿ ಪೇಪರ್ ತರಿಸಿಕೊಳ್ಳಲು ಅನುವಾಗಿದ್ದ. ಆದರೆ ಅಷ್ಟರಲ್ಲೇ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡ. ಈವರೆಗೂ ಫಿರೋಜ್ ಪ್ರಯತಮೆ ಯಾರೆಂಬ ಮಾಹಿತಿ ಪೊಲೀಸರಿಗೂ ಲಭ್ಯವಾಗಿಲ್ಲ. ಈವರೆಗೂ ಒಟ್ಟು ಬಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ.

ಅದೇನೇ ಇದ್ದರೂ ತನ್ನ ಗರ್ಲ್ ಫ್ರೆಂಡ್ ಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಹೋದ ಪ್ರೇಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.