ಬೆಂಗಳೂರು :  ದೇಶದ ರಕ್ಷಣೆ ಮಾಡುವ ಸೈನಿಕರ ಬಗ್ಗೆ ಆಡಳಿತ ವರ್ಗದ ಅಸೀಮ ನಿರ್ಲಕ್ಷ್ಯಕ್ಕೆ ಇದೊಂದು ತಾಜಾ ಉದಾಹರಣೆ. ಮಾಜಿ ಸೈನಿಕರೊಬ್ಬರು ತಮಗೆ ಕೃಷಿ ಜಮೀನು ಮಂಜೂರು ಮಾಡುವಂತೆ ಕಳೆದ 33 ವರ್ಷಗಳಿಂದ ಹತ್ತಾರು ಕಚೇರಿ, ಆರೇಳು ಬಾರಿ ನ್ಯಾಯಾಲಯಗಳ ಮೆಟ್ಟಿಲು ಏರಿದರೂ ಈವರೆಗೆ ನ್ಯಾಯ ಸಿಗದೇ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯ ಬದುಕಿನ ಬದಲು ಕೊರಗುವಂತಾಗಿದೆ.

ಶಿವಮೊಗ್ಗದ ನಿವಾಸಿಯಾದ ಮಾಜಿ ಸೈನಿಕ ರವೀಂದ್ರ, ಕೃಷಿ ಜಮೀನು ಮಂಜೂರಾತಿಗೆ 1986ರಿಂದ ಸರ್ಕಾರಿ ಕಚೇರಿಗಳನ್ನು ಎಡತಾಕಿ, ಹತ್ತಾರು ಬಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರಾಜ್ಯ ಹೈಕೋರ್ಟ್‌ನಲ್ಲಿಯೇ ಐದು ಬಾರಿ ಹಾಗೂ ಸಿವಿಲ್‌ ಕೋರ್ಟ್‌ನಲ್ಲಿ ಎರಡು ಬಾರಿ ಕಾನೂನು ಹೋರಾಟ ಮಾಡಿದ್ದಾರೆ. ಹೈಕೋರ್ಟ್‌ ಐದು ಬಾರಿ ಆದೇಶಿಸಿದ್ದರೂ ಸರ್ಕಾರ ಮಾತ್ರ ರವೀಂದ್ರ ಅವರಿಗೆ ಕೃಷಿ ಜಮೀನು ನೀಡಿಲ್ಲ. ಪ್ರತಿ ಬಾರಿಯೂ ಶಿವಮೊಗ್ಗ ಜಿಲ್ಲೆಯಲ್ಲಿ ಜಮೀನು ಲಭ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಹೇಳುತ್ತಿದ್ದಾರೆ. ಅರವತ್ತು ವರ್ಷವಾಗಿರುವ ರವೀಂದ್ರ ಇಷ್ಟುವರ್ಷ ಸುದೀರ್ಘ ಹೋರಾಟ ನಡೆಸಿದರೂ ನ್ಯಾಯ ಸಿಗಲಿಲ್ಲ ಎಂಬ ಕೊರಗಿನಲ್ಲಿ ದಿನ ದೂಡುತ್ತಿದ್ದಾರೆ.

1986ರಿಂದ 2019ರವರೆಗೆ ಹೋರಾಟ:

ಜಮೀನಿಗಾಗಿ ರವೀಂದ್ರ ಅವರ ಹೋರಾಟ 1986ರಲ್ಲಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆ ಕೆ.ಎಚ್‌.ಬಿ. ಕಾಲೋನಿ ನಿವಾಸಿಯಾಗಿರುವ ಆರ್‌.ರವೀಂದ್ರ (60) 1980ರಿಂದ 1997ರವರೆಗೆ 17 ವರ್ಷ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಯೋಧರಿಗೆ ಕೃಷಿ ಜಮೀನು ನೀಡುವ ರಾಜ್ಯ ಸರ್ಕಾರದ ಯೋಜನೆಯ ಅನ್ವಯ ಸೇವೆಯಲ್ಲಿರುವಾಗಲೇ ಜಮೀನು ಮಂಜೂರಾತಿ ಕೋರಿ 1986ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. 1990ರಲ್ಲಿ ಭದ್ರಾವತಿ ತಾಲೂಕಿನ ಬರಂದೂರು ಗ್ರಾಮದ ಸರ್ವೇ ನಂಬರ್‌ 74ರಲ್ಲಿನ ಆರು ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಆದರೆ ಸ್ಥಳೀಯರು ಆಕ್ಷೇಪಿಸಿದ್ದ ಕಾರಣಕ್ಕೆ 1998ರ ಆ.13ರಂದು ಜಮೀನು ಮಂಜೂರಾತಿ ಆದೇಶ ರದ್ದುಪಡಿಸಿದ್ದರು.

ಈ ಆದೇಶದ ವಿರುದ್ಧ ಮೊದಲ ಬಾರಿಗೆ 1999ರಲ್ಲಿ ರವೀಂದ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು. 2001ರ ಆಗಸ್ಟ್‌ನಲ್ಲಿ ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿ ನೀಡಿದ್ದ ಹೇಳಿಕೆ ಮೇರೆಗೆ ಹುರಳಿಹಳ್ಳಿ ಗ್ರಾಮದ ಸರ್ವೇ ನಂಬರ್‌ 39ರಲ್ಲಿ ಲಭ್ಯವಿರುವ ಜಮೀನನ್ನು ರವೀಂದ್ರರಿಗೆ ನೀಡಲು ಹೈಕೋರ್ಟ್‌ ನಿರ್ದೇಶಿಸಿತ್ತು. ಅದರಂತೆ ಹುರಳಿಹಳ್ಳಿಯಲ್ಲಿ 10 ಎಕರೆ ಜಮೀನನ್ನು 2001ರ ಫೆಬ್ರವರಿ 27ರಂದು ನೀಡಲಾಗಿತ್ತು. ಆದರೆ, ಈ ಇದು ಅರಣ್ಯ ಪ್ರದೇಶ ಎಂದು ಅರಣ್ಯಾಧಿಕಾರಿಗಳು ಕ್ಲೇಮು ಮಾಡಿದ್ದರು. ಈ ಕುರಿತು 2001ರಿಂದ 2010ರವರೆಗೆ ಸಿವಿಲ್‌ ಕೊರ್ಟ್‌ನಲ್ಲಿ ನಡೆಸಿದ ಎರಡು ಸುತ್ತಿನ ಕಾನೂನು ಹೋರಾಟದಲ್ಲಿ ಸೋಲುಂಡ ರವೀಂದ್ರ 2010ರಲ್ಲಿ ಮತ್ತೆ ಹೈಕೋರ್ಟ್‌ ಮಟ್ಟಿಲೇರಿದ್ದರು.

ಹೈಕೋರ್ಟ್‌ ರವೀಂದ್ರಗೆ ಮಂಜೂರು ಮಾಡಿದ 10 ಎಕರೆ ಜಮೀನು ಅರಣ್ಯ ಪ್ರದೇಶಕ್ಕೆ ಸೇರಿದ್ದರೆ ಅದನ್ನು ಹಿಂಪಡೆದು ಬದಲಿ ನಿವೇಶನ ಮಂಜೂರು ಮಾಡುವಂತೆ 2012ರಲ್ಲಿ ಸರ್ಕಾರಕ್ಕೆ ಆದೇಶಿಸಿತ್ತು. 2013ರಲ್ಲಿ ಆ ಜಮೀನು ಹಿಂಪಡೆದ ಜಿಲ್ಲಾಧಿಕಾರಿ ಬದಲಿ ನಿವೇಶನ ನೀಡುವ ಗೋಜಿಗೆ ಹೋಗಲಿಲ್ಲ. ಹೀಗಾಗಿ 2013 ಮತ್ತು 2016ರಲ್ಲಿ ಮತ್ತೆ ಹೈಕೋರ್ಟ್‌ಗೆ ಬರಬೇಕಾಯಿತು. ಸರ್ಕಾರಕ್ಕೆ ಆದೇಶಿಸಿದ್ದರೂ ಜಮೀನು ನೀಡದ ಕಾರಣ 2018ರಲ್ಲಿ 5ನೇ ಬಾರಿಗೆ ಹೈಕೋರ್ಟ್‌ ಮೆಟ್ಟಿಲೇರಿದರು.

ಸರ್ಕಾರದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್‌, ಅರ್ಜಿದಾರ ಒಬ್ಬ ಮಾಜಿ ಸೈನಿಕ. 1986ರಿಂದ ಕಾನೂನು ಹೋರಾಟ ಮಾಡುತ್ತಿದ್ದರೂ ಹಾಗೂ ಹೈಕೋರ್ಟ್‌ ಹಲವು ನಿರ್ದೇಶನ ನೀಡಿದ್ದರೂ ಸರ್ಕಾರ ಮಾತ್ರ ಸಮಸ್ಯೆ ಬಗೆಹರಿಸಿಲ್ಲ. ಇನ್ನು ಮೂರು ತಿಂಗಳಲ್ಲಿ ರವೀಂದ್ರಗೆ ಬದಲಿ ಜಮೀನು ಮಂಜೂರು ಮಾಡಬೇಕು ಎಂದು ರಾಜ್ಯ ಕಂದಾಯ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗೆ 2019ರ ಜ.7ರಂದು ತಾಕೀತು ಮಾಡಿತು. ಈ ಆದೇಶದ ಮೇರೆಗೆ ಜ.18ರಂದೇ ಜಿಲ್ಲಾಧಿಕಾರಿಗೆ ರವೀಂದ್ರ ಅವರು ಮನವಿ ಮಾಡಿದ್ದರೂ ಈವರೆಗೂ ಜಾಮೀನು ಪತ್ತೆಹಚ್ಚಿ ಮಂಜೂರು ಮಾಡಿಲ್ಲ.

2017-18ರಲ್ಲಿ ಭದ್ರಾವತಿಯಲ್ಲಿ 11 ಮಂದಿ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಬದಲಿ ಜಮೀನು ಮಂಜೂರು ಮಾಡಲಾಗಿದೆ. ನನಗೆ ಮಾತ್ರ ಜಮೀನು ಲಭ್ಯವಾಗಿಲ್ಲ, ಅರಣ್ಯ ಇಲಾಖೆ ಕ್ಲಿಯರೆನ್ಸ್‌ ಕೊಡುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಹೈಕೊರ್ಟ್‌ ಐದು ಬಾರಿ ಆದೇಶಿದ್ದರೂ ಅದಕ್ಕೆ ಶಿವಮೊಗ್ಗ ಜಿಲ್ಲಾಡಳಿತ, ಕಂದಾಯ ಇಲಾಖೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ.

ವರದಿ :  ವೆಂಕಟೇಶ್‌ ಕಲಿಪಿ