ಐದು ಬ್ಯಾಂಕುಗಳ 32 ಲಕ್ಷ ಡೆಬಿಟ್, ಕ್ರೆಡಿಟ್ ಕಾರ್ಡ್'ಗಳ ಮಾಹಿತಿ ಸೋರಿಕೆ | ಹ್ಯಾಕರ್'ಗಳಿಂದ ಸುರಕ್ಷತೆ ಛೇದನ | ಚೀನಾ ಮೂಲದಿಂದ ಅಕ್ರಮ ವಹಿವಾಟು | ಗ್ರಾಹಕರ ದೂರು ಆಧರಿಸಿ ಎನ್'ಪಿಸಿಐನಿಂದ ಪತ್ತೆ | ಬ್ಯಾಂಕುಗಳ ಎಚ್ಚರಿಕೆಎಟಿಎಂ ಕಾರ್ಡ್ ವಿಚಾರದಲ್ಲಿ ನಾವು ಮೋಸ ಹೋಗುವ ಐದು ವಿಧಾನಗಳ ಬಗ್ಗೆ ತಿಳಿದಿರಿ

ಬೆಂಗಳೂರು: ರಾಷ್ಟ್ರದ ಪ್ರಮುಖ ಐದು ಬ್ಯಾಂಕುಗಳ 32 ಲಕ್ಷ ಗ್ರಾಹಕರ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮಾಹಿತಿಗೆ ಕನ್ನ ಹಾಕಲಾಗಿದೆ. ಇವಿಷ್ಟೂಕಾರ್ಡ್‌ಗಳು ಈಗ ಅಪಾಯದಲ್ಲಿವೆ. ಮಾಹಿತಿ ತಂತ್ರಜ್ಞಾನ ನುಸುಳುಕೋರರು ಬ್ಯಾಂಕಿಂಗ್‌ ವಲಯದ ಸುರಕ್ಷತಾ ಕವಚ ಛೇದಿಸಿದ್ದಾರೆ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಬಂದ ನಂತರ ದೇಶದಲ್ಲಾಗಿರುವ ಅತಿದೊಡ್ಡ ಸುರಕ್ಷತೆ ಛೇದ ಇದಾಗಿದೆ.
ಚೀನಾ ಮೂಲದಿಂದ ಈ 32 ಲಕ್ಷ ಕಾರ್ಡ್‌ಗಳ ಪೈಕಿ ಕೆಲವು ಕಾರ್ಡ್‌ಗಳನ್ನು ಬಳಸಿ ಅಕ್ರಮ ವಹಿವಾಟು ನಡೆಸಲಾಗಿದೆ. ತಮಗರಿವಿಲ್ಲದಂತೆ ಕಾರ್ಡ್‌ಗಳನ್ನು ಬಳಕೆ ಮಾಡಿರುವ ಬಗ್ಗೆ ಗ್ರಾಹಕರು ನೀಡಿರುವ ದೂರನ್ನಾಧರಿಸಿ ನ್ಯಾಷನಲ್‌ ಪೇಮೆಂಟ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಪತ್ತೆ ಹಚ್ಚಿರುವ ಮಾಹಿತಿಯಂತೆ ಸುರಕ್ಷತೆಯ ಛೇದದ ಮೂಲ ಚೀನಾ. ಸುರಕ್ಷತೆ ಛೇದ ಖಚಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಂದ ಈ 5 ಬ್ಯಾಂಕುಗಳೂ ಕಾರ್ಡ್‌ ಗಳ ಅಂತಾರಾಷ್ಟ್ರೀಯ ವಹಿವಾಟನ್ನು ಸ್ಥಗಿತಗೊಳಿಸಿವೆ.
ಭಾರತದ ಅತಿದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ಗಳಿಗೆ ಸೇರಿದ 32 ಲಕ್ಷ ಕಾರ್ಡ್‌ಗಳ ಮಾಹಿತಿಯ ಸುರಕ್ಷತಾ ವಲಯವನ್ನು ಛೇದಿಸಲಾಗಿದೆ.
ತಕ್ಷಣದ ಕ್ರಮವಾಗಿ ಎಸ್‌ಬಿಐ ಆರು ಲಕ್ಷ ಕಾರ್ಡ್‌ಗಳನ್ನು ಸ್ಥಗಿತಗೊಳಿಸಿದೆ. ಈ ಗ್ರಾಹಕರಿಗೆ ಹೊಸ ಕಾರ್ಡ್‌ಗಳನ್ನು ವಿತರಿಸಲಿದೆ. ಉಳಿದ ಬ್ಯಾಂಕುಗಳು ಗ್ರಾಹಕರು ತಮ್ಮ ತಮ್ಮ ಪಿನ್‌ ಬದಲಾಯಿಸುವಂತೆ ಸೂಚಿಸಿವೆ. 
ಏನಾಗಿದೆ?: ಸದ್ಯಕ್ಕೆ ಲಭ್ಯ ಮಾಹಿತಿ ಪ್ರಕಾರ, ಸುರಕ್ಷತೆ ಛೇದದ ಮೂಲ ಯೆಸ್‌ ಬ್ಯಾಂಕ್‌. ಯೆಸ್‌ ಬ್ಯಾಂಕ್‌ನ ಎಟಿಎಂನಲ್ಲಿ ಮಾಲ್ವೆರ್‌ (ಕಂಪ್ಯೂಟರ್‌ ಸುರಕ್ಷತೆಯನ್ನು ಛೇದಿಸುವ, ಸುರಕ್ಷಿತ, ಸುಲಲಿತ ಕಾರ್ಯನಿರ್ವಹಣೆಗೆ ಅಡ್ಡಿಯೊಡ್ಡುವ ಒಂದು ತಂತ್ರಾಂಶ) ಹರಿಯಬಿಡಲಾಗಿದೆ. ಇದು ಯೆಸ್‌ ಬ್ಯಾಂಕ್‌ ಎಟಿಎಂ ನಿರ್ವ­ಹಿಸುತ್ತಿರುವ ಹಿಟಾಚಿ ಪೇಮೆಂಟ್‌ ಸವೀರ್‍ಸ್‌ ಮೂಲಕವೂ ನುಸುಳಿರುವ ಸಾಧ್ಯತೆ ಇದೆ. 
ಹರಡಿದ್ದು ಹೇಗೆ?: ಯೆಸ್‌ ಬ್ಯಾಂಕ್‌'ಗೆ ನುಸುಳಿದ ಮಾಲ್ವೇರ್‌ನಲ್ಲಿ ಯೆಸ್‌ ಬ್ಯಾಂಕೇತರ ಎಟಿಎಂ ಬಳಸಿದಾಗ ಆ ಬ್ಯಾಂಕಿಗೂ ಮಾಲ್ವೇರ್‌ ನುಸುಳುತ್ತದೆ. ಯೆಸ್‌ ಬ್ಯಾಂಕ್‌ನ ಎಟಿಎಂ ಕಾರ್ಡ್‌ ಅನ್ನು ಬೇರೆ ಬ್ಯಾಂಕ್‌ನ ಎಟಿಎಂನಲ್ಲಿ ಬಳಸಿದರೂ ಮಾಲ್ವೇರ್‌ ನುಸುಳುತ್ತದೆ. ಹೀಗಾಗಿಯೇ ಎಸ್‌ಬಿಐ, ಆಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕುಗಳಿಗೂ ಮಾಲ್ವೇರ್‌ ನುಸುಳಿ ಸುರಕ್ಷತೆ ಛೇದವಾಗಿದೆ. 
ಏನಾಗುತ್ತದೆ?: ಮಾಲ್ವೇರ್‌ ನುಸುಳಿದಾಗ ಸುರಕ್ಷತಾ ಕವಚ ಛೇದಗೊಳ್ಳುತ್ತದೆ. ಸುರಕ್ಷತೆ ಛೇದಗೊಂಡರೆ ಹ್ಯಾಕರ್‌ಗಳಿಗೆ ಹಬ್ಬ. ಮಾಲ್ವೇರ್‌ ಹರಿಯಬಿಟ್ಟಹ್ಯಾಕರ್‌ಗಳು ಭಾರಿ ಮೊತ್ತ ಇರುವ ಖಾತೆಗಳಿಂದ ಅಕ್ರಮವಾಗಿ ವಹಿವಾಟು ನಡೆಸುತ್ತಾರೆ. ಹಣವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ.

ಅಸುರಕ್ಷಿತ ಕಾರ್ಡ್ ಪರಿಣಾಮವೇನು?
* ಮುನ್ನೆಚ್ಚರಿಕೆ ಕ್ರಮವಾಗಿ 32 ಲಕ್ಷ ಕಾರ್ಡುಗಳಿಗೆ ಎಲ್ಲಾ ಅಂತಾರಾಷ್ಟ್ರೀಯ ವಹಿವಾಟು ಸೌಲಭ್ಯ ಸ್ಥಗಿತ.
* ಎಸ್‌ಬಿಐ 6 ಲಕ್ಷ ಕಾರ್ಡ್‌ಗಳನ್ನು ಸ್ಥಗಿತಗೊಳಿಸಿದ್ದು, ಬೇರೆ ಕಾರ್ಡ್‌ ನೀಡಲಿದೆ.
* ಉಳಿದ ಬ್ಯಾಂಕುಗಳು ತಕ್ಷಣವೇ ಪಿನ್‌ ಬದಲಿಸುವಂತೆ ಗ್ರಾಹಕರಿಗೆ ಸೂಚಿಸಿವೆ.

ಎಸ್ಸೆಮ್ಮೆಸ್ ಮಾಹಿತಿ ಬರುವುದೇ ಇಲ್ಲ:
ಸಾಮಾನ್ಯವಾಗಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ವಹಿವಾಟು ನಡೆಸಿದಾಗ ನೋಂದಾಯಿಸಿದ ಮೊಬೈಲ್‌ನಂಬರ್‌ಗೆ ತಕ್ಷಣವೇ ಎಸ್‌ಎಂಎಸ್‌ ರವಾನೆಯಾಗುತ್ತದೆ. ಆದರೆ, ಅಕ್ರಮವಾಗಿ ವಹಿವಾಟು ನಡೆಸಿದಾಗ ಎಸ್‌ಎಂಎಸ್‌ ಮೂಲಕ ಖಾತೆಯಲ್ಲಾದ ವಹಿವಾಟಿನ ಮಾಹಿತಿ ರವಾನೆಯಾಗುವುದಿಲ್ಲ. ಅಂದರೆ ಗ್ರಾಹಕರ ಖಾತೆಯಿಂದ ಭಾರಿ ಮೊತ್ತದ ಹಣ ವರ್ಗಾಯಿಸಲ್ಪಟ್ಟರೂ ಅದು ಗೊತ್ತಾಗುವುದಿಲ್ಲ.

ಬ್ಯಾಂಕುಗಳ ಹೊಣೆ ಏನು?
* ಗ್ರಾಹಕರ ಪಾತ್ರಇಲ್ಲದಿದ್ದಾಗಲೂ ಅವರ ಖಾತೆಯಿಂದ ಹಣ ವರ್ಗಾವಣೆ ಆದರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಹೊರಬೇಕು ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಇತ್ತೀಚೆಗೆ ಪ್ರಕಟಿಸಿರುವ ಬ್ಯಾಂಕಿಂಗ್‌ ಸುರಕ್ಷತಾ ಮಾರ್ಗಸೂಚಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
* ಇಂತಹ ಸಂದರ್ಭದಲ್ಲಿ ಗ್ರಾಹಕರು ತಕ್ಷಣವೇ ಬ್ಯಾಂಕ್‌ ಗಮನಕ್ಕೆ ತರಬೇಕು. ಬ್ಯಾಂಕು ಹತ್ತು ದಿನದ ಒಳಗೆ ನಷ್ಟಭರ್ತಿಮಾಡಬೇಕು, ಇಲ್ಲವೇ ಅಕ್ರಮ ವಹಿವಾಟು ನಡೆದಿರುವ ಬಗ್ಗೆ ವಿಸ್ತೃತ ವಿವರಣೆ ನೀಡಿ ಗ್ರಾಹಕರಿಗೆ ಮನವರಿಕೆ ಮಾಡಬೇಕು. 90 ದಿನಗಳ ಒಳಗೆ ಗ್ರಾಹಕರ ದೂರನ್ನು ಇತ್ಯರ್ಥ ಪಡಿಸಬೇಕು.

ಗ್ರಾಹಕರು ಏನು ಮಾಡಬೇಕು?
* ತಮ್ಮ ಖಾತೆಯಲ್ಲಿ ತಮಗರಿವಿಲ್ಲದಂತೆ ವಹಿವಾಟು ನಡೆದಿರುವುದು ಗೊತ್ತಾದ ತಕ್ಷಣವೇ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತರಬೇಕು. ಅಗತ್ಯಬಿದ್ದರೆ ಲಿಖಿತ ದೂರು ಸಲ್ಲಿಸಬೇಕು.
* ಜತೆಗೆ ಎಟಿಎಂ ಪಿನ್‌ ಬದಲಾಯಿಸಬೇಕು.
* ಭಾರಿ ಪ್ರಮಾಣದಲ್ಲಿ ಸುರಕ್ಷತೆ ಛೇದವಾದಾಗ ಒಂದು ಬಾರಿ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಎಟಿಎಂನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು.

(ಕನ್ನಡಪ್ರಭ ವಾರ್ತೆ)

ಎಟಿಎಂ ಕಾರ್ಡ್ ವಿಚಾರದಲ್ಲಿ ನಾವು ಮೋಸ ಹೋಗುವ ಐದು ವಿಧಾನಗಳ ಬಗ್ಗೆ ತಿಳಿದಿರಿ