ಪಂಪ್‌ಸೆಟ್ ಪೈಪ್‌ನಲ್ಲಿ ಸಿಲುಕಿ 30ಕ್ಕೂ ಅಧಿಕ ಹಾವುಗಳ ಸಾವು
ಸುಮಾರು 30ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಕೊಳವೆಬಾವಿ ಪಂಪ್‌ಸೆಟ್‌ನ ಪೈಪುಗಳಲ್ಲಿ ಸಿಲುಕಿ ಸಾವನ್ನಪ್ಪಿವೆ.
ಚಿಕ್ಕೋಡಿ: ವಿವಿಧ ಜಾತಿಯ ಸುಮಾರು 30ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಕೊಳವೆಬಾವಿ ಪಂಪ್‌ಸೆಟ್‌ನ ಪೈಪುಗಳಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಭೀಮು ಸಂಗಮೆ ಎಂಬ ರೈತನ ಹೊಲದಲ್ಲಿ ಈ ಹಾವುಗಳು ಸಾಮೂಹಿಕವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರೈತ ಭೀಮು ಅವರ ಜಮೀನು ಕೃಷ್ಣಾ ನದಿಗೆ ಹೊಂದಿಕೊಂಡಿದೆ. ಮಳೆಗಾಲದಿಂದಾಗಿ ಕೃಷ್ಣಾ ನದಿಗೆ ಜೀವಕಳೆ ಬಂದಿದ್ದರಿಂದ ಕಳೆದ ಒಂದು ತಿಂಗಳಿಂದ ಪಂಪ್‌ಸೆಟ್ ಬಂದ್ ಆಗಿತ್ತು. ಆದರೆ, ಇತ್ತೀಚೆಗೆ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿತ್ತು.
ಹೀಗಾಗಿ ಇತ್ತೀಚೆಗೆ ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ರೈತ ಅದನ್ನು ಚಾಲು ಮಾಡಿದ್ದಾನೆ. ನಂತರ ಜಮೀನು ಕಡೆ ಹೋದಾಗ ಪೈಪ್‌ನಲ್ಲಿ ಸಿಲುಕಿಕೊಂಡಿರುವ ಮೃತ ಹಾವುಗಳ ಅವಶೇಷಗಳು ಹೊರಬಿದ್ದಿವೆ. ಇದರಿಂದ ಗಾಬರಿಗೊಂಡ ರೈತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಅಂಕಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಾವುಗಳ ಅವಶೇಷಗಳನ್ನು ಪರಿಶೀಲಿಸಿದರು. ಬಹುತೇಕ ಹಾವುಗಳು ಕೊಳವೆ ಬಾವಿಯೊಳಗಡೆಯಿಂದ ಹೊರಬರಲಾಗದೆ, ಉಸಿರುಗಟ್ಟಿಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.