ಬಿಡಬ್ಲು ಎಸ್​ಎಸ್​ಬಿ ನಿರ್ಲಕ್ಷ್ಯಕ್ಕೆ ಮೂವರು ಕಾರ್ಮಿಕರು ಬಲಿಯಾಗಿರುವ ಘಟನೆ ತಡರಾತ್ರಿ 12.30ರ ಸುಮಾರಿಗೆ ಬೆಂಗಳೂರಿನ ಸಿವಿ ರಾಮನ್​ ನಗರದ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ಬೆಂಗಳೂರು(ಮಾ.07): ಬಿಡಬ್ಲು ಎಸ್​ಎಸ್​ಬಿ ನಿರ್ಲಕ್ಷ್ಯಕ್ಕೆ ಮೂವರು ಕಾರ್ಮಿಕರು ಬಲಿಯಾಗಿರುವ ಘಟನೆ ತಡರಾತ್ರಿ 12.30ರ ಸುಮಾರಿಗೆ ಬೆಂಗಳೂರಿನ ಸಿವಿ ರಾಮನ್​ ನಗರದ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ಮ್ಯಾನ್​ ಹೋಲ್ ದುರಸ್ತಿಗೆಂದು ಇಳಿದಿದ್ದ ಮೂವರು ಮ್ಯಾನ್​ ಹೋಲ್​ ಒಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ ಟ್ರಾಕ್ಟರ್​ನಲ್ಲಿ ಬಂದಿದ್ದ ಇಬ್ಬರು ಕಾರ್ಮಿಕರು ಒಳಗೆ ದುರಸ್ತಿ ನಡೆಸಲು ಇಳಿದಿದ್ದರು. ನೀರಿನ ಸೋರಿಕೆ ಮತ್ತು ಒಳಗೆ ಗೋಡೆ ನಿರ್ಮಿಸಲೆಂದು ಕಾರ್ಮಿಕರು ಒಳಗೆ ಇಳಿದಿದ್ದರು. ಈ ವೇಳೆ ಇಬ್ಬರೂ ಆಮ್ಲಜನಕದ ಕೊರತೆಯಿಂದ ಕಿರುಚಾಡಿದ್ದಾರೆ. ತಕ್ಷಣ ಟ್ರಾಕ್ಟರ್​ ಚಾಲಕ ಹಗ್ಗದ ಸಹಾಯದಿಂದ ಒಳಗೆ ಇಳಿದಿದ್ದಾನೆ. ಕೊನೆಗೆ ಮೂವರೂ ಮ್ಯಾನ್​ ಹೋಲ್​ನ ಒಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ರಾತ್ರಿ ಒಂದು ಗಂಟೆ ವೇಳೆಗೆ ಅಗ್ನಿಶಾಮಕ ಸಿಬ್ಬಂದಿಗೆ ಘಟನೆ ಬಗ್ಗೆ ಮಾಹಿತಿ ದೊರೆತಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಮೂವರೂ ಮೃತಪಟ್ಟಿರುವುದು ಗೊತ್ತಾಗಿದೆ. ಮೂರೂ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದದಿದ್ದಾರೆ. ಕೆಲಸ ಮಾಡಲು ಬಂದಿದ್ದ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಒದಗಿಸದೇ ಇರುವುದು, 15 ಅಡಿ ಆಳದ ಮ್ಯಾನ್​ಹೋಲ್​ಗೆ ಇಳಿಯುವವರಿಗೆ ಆಮ್ಲಜನಕ ನೀಡದೇ ನಿರ್ಲಕ್ಷ್ಯ ವಹಿಸಿದ್ದೇ ಘಟನೆ ನಡೆಯಲು ಕಾರಣವಾಗಿದೆ.

ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರು ನಿರ್ಲಕ್ಷ್ಯದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ಕಾರ್ಮಿಕರ ಗುರುತು ಪತ್ತೆಯಾಗಿಲ್ಲ. ದುರಸ್ತಿ ಗುತ್ತಿಗೆ ಪಡೆದ ಕಾಂಟ್ರಾಕ್ಟರ್​ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.