ಹುಣಸೂರು :  ಕಳೆದ ಬಾರಿ ಸಾಕಷ್ಟುವಿವಾದಗಳಿಗೆ ಕಾರಣವಾಗಿದ್ದ, ಹುಣಸೂರಿನ ಹನುಮ ಜಯಂತಿ ಈ ಬಾರಿ ಶಾಂತಿಯುತವಾಗಿ ಅತ್ಯಂತ ವಿಜೃಂಭಣೆಯಿಂದ ಶನಿವಾರ ನೆರವೇರಿತು. 

ಸಂಸದ ಪ್ರತಾಪ್‌ ಸಿಂಹ ಮುಂದಾಳತ್ವದಲ್ಲಿ ನಡೆದ ಜಯಂತಿಯಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಜೆಡಿಎಸ್‌ನ ಹಾಲಿ ಶಾಸಕ ಎಚ್‌. ವಿಶ್ವನಾಥ್‌, ಕಾಂಗ್ರೆಸ್ಸಿನ ಮಾಜಿ ಶಾಸಕ ಮಂಜುನಾಥ್‌ ಅವರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸ್ಥಳೀಯ ಕೆಲ ಮುಸ್ಲಿಂ ಮುಖಂಡರು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದರು.

ಬೆಳಿಗ್ಗೆ 11.30ಕ್ಕೆ ಆರಂಭವಾದ ಮೆರವಣಿಗೆಯು ನಿಧಾನಗತಿಯಲ್ಲಿ ಸಾಗಿ ಮಂಜುನಾಥಸ್ವಾಮಿ ದೇವಾಲಯಕ್ಕೆ ಸಂಜೆ 5.30ರ ವೇಳೆಗೆ ಆಗಮಿಸಿತು. ಸುಮಾರು 6 ಕಿಮೀ ದೂರವನ್ನು ಕ್ರಮಿಸಲು ಆರೂವರೆ ಗಂಟೆಗಳ ಕಾಲ ಹಿಡಿಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಹುತೇಕರು ಕೇಸರಿ ವರ್ಣದ ಟೀಶರ್ಟ್‌ ಧರಿಸಿ, ಹಣೆಗೆ ತಿಲಕವಿಟ್ಟಿದ್ದರು, ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ಜೈಕಾರ ಕೂಗುತ್ತಿದ್ದರು. ಇಡೀ ವಾತಾವರಣ ಕೇಸರಿಮಯವಾಗಿತ್ತು.