ಬೆಂಗಳೂರು :  ಸಂಪುಟ ನರಳಾಟ ಇನ್ನೂ ಮುಂದುವರೆದಿದ್ದು, ಕಾಂಗ್ರೆಸ್ಸಿನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಫಲ ಕೊಡದ ಕಾರಣ ಮತ್ತೊಬ್ಬ ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.

ಇದೇ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯುವ ನಿರೀಕ್ಷೆಯಿದ್ದು, ಖಾಲಿ ಇರುವ ಒಟ್ಟು ಮೂರು ಸಚಿವ ಸ್ಥಾನಗಳ ಪೈಕಿ (ಕಾಂಗ್ರೆಸ್ 1, ಜೆಡಿಎಸ್ 2 ) ಎರಡು ಸ್ಥಾನಗಳನ್ನು ಪಕ್ಷೇತರರಾದ ರಾಣೆಬೆನ್ನೂರು ಶಾಸಕ ಆರ್. ಶಂಕರ್, ಮುಳಬಾಗಿಲು ಶಾಸಕ ಎನ್. ನಾಗೇಶ್ ಅವರಿಗೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಉಳಿದ ಒಂದು ಸ್ಥಾನ ತುಂಬ ಬೇಕೆ ಅಥವಾ ಬೇಡವೇ ಎಂಬ ಚರ್ಚೆಯೂ ಇತ್ತೀಚೆಗೆ ದೋಸ್ತಿ ಪಕ್ಷ ಗಳ ನಾಯಕರ ನಡುವೆ ನಡೆದಿತ್ತು. ಈ ವೇಳೆ ಅತೃಪ್ತ ಶಾಸಕರ ನೇತೃತ್ವ ವಹಿಸಿರುವ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಜಾರಕಿಹೊಳಿ ಒಪ್ಪಿದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಸಿದ್ದರಾಮಯ್ಯ ಸಹ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಪ್ರಯತ್ನ ನಡೆಸಿದರಾದರೂ ರಮೇಶ್ ಮನವೊಲಿಸುವ ಪ್ರಯತ್ನ ಇನ್ನೂ ಫಲ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಒಪ್ಪದಿದ್ದರೆ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರನ್ನು ಪರಿಗಣಿಸು ವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಕೂಡ ಪೂರಕವಾಗಿ ಸ್ಪಂದಿಸಿದ್ದು, ಸಂಪುಟ ವಿಸ್ತರಣೆ ವೇಳೆ ಪಾಟೀಲ್‌ಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಅತೃಪ್ತಿ ದುಪ್ಪಟ್ಟು ಸಾಧ್ಯತೆ: ಈ ನಡುವೆ ಅತೃಪ್ತಿ ಶಮನಕ್ಕೆ ಯತ್ನಿಸಿದಷ್ಟೂ ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತರ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದೀಗ ಪಕ್ಷೇತರ ಇಬ್ಬರು ಶಾಸಕರಿಗೆ ಮಾತ್ರ ಅವಕಾಶ ಕೊಟ್ಟರೆ ಉಳಿದ ಕಾಂಗ್ರೆಸ್ ಶಾಸಕರಲ್ಲಿ ಭಿನ್ನಮತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಅನ್ಯಾಯಕ್ಕೆ ಒಳಗಾದ ಎಲ್ಲಾ ಶಾಸಕರಿಗೂ ಸಮಾನ ಪ್ರಾಧಾನ್ಯತೆ ನೀಡಬೇಕು. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಬಳಿಯುವುದರಿಂದ ಸರ್ಕಾರಕ್ಕೆ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗಲಿವೆ ಎಂದು ಕೆಲ ಅತೃಪ್ತ ಶಾಸಕರು ಎಚ್ಚರಿಸಿದ್ದಾರೆ ಎನ್ನಲಾಗುತ್ತಿದೆ.