ಬೆಂಗಳೂರು (ಜು. 10):  ಚಿನ್ನಸ್ವಾಮಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಅಪರಾಧಿಗಳಾದ ಅಜೀಜ್‌ ಖೊಮೆನಿ, ಕಮಲ್‌ ಹಸನ್‌ ಮತ್ತು ಕಪಿಲ್‌ ಅಖ್ತರ್‌ ಶಿಕ್ಷೆಗೊಳಾದವರು. ಪ್ರಕರಣದಲ್ಲಿ ಭಾಗಿಯಾದ ಶಂಕಿತ ಉಗ್ರರಿಗೆ ಇವರು ಆಶ್ರಯ ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಿದ್ದಲಿಂಗ ಪ್ರಭು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೋಮವಾರ ಶಿಕ್ಷೆ ಪ್ರಕಟಿಸಿದ್ದಾರೆ

ಚಿನ್ನಸ್ವಾಮಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಅಪರಾಧಿಗಳು ಕೃತ್ಯಕ್ಕೆ ಸಹಕಾರ ನೀಡಿರುವುದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು. ವಿಚಾರಣೆ ಹಾಗೂ ಅಪರಾಧಿಗಳ ಹೇಳಿಕೆಯ ಆಧಾರದ ಮೇಲೆ ಆರೋಪವು ಸಾಬೀತು ಎಂದು ಪರಿಗಣಿಸಿದ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

ಆರೋಪಿಗಳ ಪರ ವಕೀಲ ಎಸ್‌.ಬಾಲನ್‌ ಅವರು, ಪ್ರಕರಣದಲ್ಲಿ ಬಂಧಿತ ಆರೋಪಿಗಳು ಕೇವಲ ದೆಹಲಿಯ ಮನೆಯೊಂದರಲ್ಲಿ ಸೇರಿದ ಕಾರಣಕ್ಕಾಗಿ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಪೋಷಕರು, ಹೆಂಡತಿ-ಮಕ್ಕಳಿಂದ ದೂರ ಇರುವ ಕಾರಣ ನೋವು ಅನುಭವಿಸುತ್ತಿದ್ದು, ಅನ್ಯವಿಧಿ ಇಲ್ಲದೆ ಬಲವಂತವಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳಿದ್ದು, ಏಳು ಆರೋಪಿಗಳು ನಾಪತ್ತೆಯಾಗಿದ್ದಾರೆ. ಒಬ್ಬ ಆರೋಪಿ ತಿಹಾರ್‌ ಜೈಲಿನಲ್ಲಿ ಸಹ ಕೈದಿಗಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ. ಇನ್ನುಳಿದ ಆರು ಆರೋಪಿಗಳ ಪೈಕಿ ಮೂವರು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಯಾಸಿನ್‌ ಭಟ್ಕಳ್‌ ಸೇರಿದಂತೆ ಇತರೆ ಆರೋಪಿಗಳು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅವರ ವಿಚಾರಣೆ ಇನ್ನೂ ನಡೆಯುತ್ತಿದೆ.

2010ರ ಏ.17ರಂದು ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಐಪಿಎಲ್‌ ಪಂದ್ಯ ನಡೆದಿದ್ದು, ಈ ವೇಳೆ ನಡೆದ ಸ್ಫೋಟದಲ್ಲಿ ಏಳು ಮಂದಿ ಪೊಲೀಸರು ಸೇರಿ 17 ಮಂದಿ ಗಾಯಗೊಂಡಿದ್ದರು.