ಕಾರವಾರದಿಂದ ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್‌ ಉಡುಪಿ ಬಳಿ ಅಪಘಾತಕ್ಕೀಡಾಗಿ ರೋಗಿ ಸೇರಿದಂತೆ ಮೂವರು ಮೃತಪಟ್ಟ ಘಟನೆ ನಡೆದಿದೆ. 

ಕಾರವಾರ :  ಚಿಕಿತ್ಸೆಗೆಂದು ಕಾರವಾರದಿಂದ ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್‌ ಉಡುಪಿ ಬಳಿ ಅಪಘಾತಕ್ಕೀಡಾಗಿ ರೋಗಿ ಸೇರಿದಂತೆ ಮೂವರು ಮೃತಪಟ್ಟಘಟನೆ ಶನಿವಾರ ನಡೆದಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಬಾಳೆರಾಶಿಯ ರೋಗಿ ಉಲ್ಲಾಸ್‌ ತಳೇಕರ್‌ (52), ಅವರ ಪಕ್ಕದ ಮನೆಯ ಶೈಲೇಶ ತಳೇಕರ್‌ (32), ಸಂಬಂಧಿಯಾಗಿರುವ ಮಕ್ಕೇರಿಯ ಅಶೋಕ ಕಾಣಕೋಣಕರ್‌ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಲ್ಲಾಸ್‌ ಪತ್ನಿ ಸರಿತಾ (ಸಾಧನಾ), ಉಲ್ಲಾಸ್‌ ತಳೇಕರ್‌ ಸಹೋದರ ಅರವಿಂದ ತಳೇಕರ್‌ ಗಂಭೀರ ಗಾಯಗೊಂಡಿದ್ದಾರೆ. ಉಲ್ಲಾಸ ತಳೇಕರ್‌ ಜಾಂಡೀಸ್‌ನಿಂದ ಬಳಲುತ್ತಿದ್ದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ 10 ಗಂಟೆಗೆ ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ರಾತ್ರಿ 2 ಗಂಟೆ ವೇಳೆಗೆ ಉಡುಪಿ ಜಿಲ್ಲೆಯ ಕೋಟ ಬಳಿ ಆ್ಯಂಬುಲೆನ್ಸ್‌ ಹಾಗೂ ಟ್ಯಾಂಕರ್‌ ನಡುವೆ ಡಿಕ್ಕಿ ಸಂಭವಿಸಿದೆ.

ಉಲ್ಲಾಸ್‌ ಕಾರ್ಪೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಶೈಲೇಶ ಅಂಕವಿಕಲರಾಗಿದ್ದರು. 6 ತಿಂಗಳ ಹಿಂದೆ ಇವರ ತಂದೆ, 3 ತಿಂಗಳ ಹಿಂದೆ ಇವರ ತಾಯಿ ನಿಧನರಾಗಿದ್ದರು. ವಿವಾಹ ಆಗಿರಲಿಲ್ಲ. ಪಕ್ಕದ ಮನೆಯವರಾದ್ದರಿಂದ ಸಹಾಯಕ್ಕೆಂದು ಉಲ್ಲಾಸ್‌ ಅವರ ಜತೆಗೆ ತೆರಳಿದ್ದರು. ಮಕ್ಕೇರಿಯ ಅಶೋಕ ಕಾಣಕೋಣಕರ್‌ ಆಟೋರಿಕ್ಷಾ ಚಾಲಕರಾಗಿದ್ದರು. ಇಲ್ಲಿನ ಜಿಲ್ಲಾ ಆಸ್ಪತ್ರೆ ಒಳಗೊಂಡು ಸಮೀಪ ಯಾವುದೇ ಆಸ್ಪತ್ರೆಗಳಲ್ಲಿ ಮೇಲ್ದರ್ಜೆಯ ಚಿಕಿತ್ಸೆ ಇಲ್ಲದಿರುವುದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆ ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಯನ್ನು ದಾಖಲಿಸಿಕೊಳ್ಳುತ್ತಾರೆ. ಕೊನೆಯ ಕ್ಷಣದಲ್ಲಿ ಬೇರೆಡೆ ತೆರಳುವಂತೆ ಸೂಚಿಸುತ್ತಾರೆ. ಇದು ಸರಿಯಲ್ಲ. ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ.

-ಅರುಣ ತಳೇಕರ್‌, ಉಲ್ಲಾಸ ಸಂಬಂಧಿ