ಭೋಪಾ​ಲ್‌[ಜು.28]: ಕಾಂಗ್ರೆಸ್‌ನ ಮೂವರು ಮುಖಂಡ​ರನ್ನು ಮಕ್ಕಳ ಕಳ್ಳ​ರೆಂದು ಭಾವಿ​ಸಿದ ಗ್ರಾಮ​ಸ್ಥರ ಗುಂಪೊಂದು ಅವ​ರನ್ನು ಹಿಗ್ಗಾ​ಮುಗ್ಗಾ ಥಳಿ​ಸಿದ ಘಟನೆ ಮಧ್ಯ​ಪ್ರ​ದೇ​ಶ​ದ ಬೆತುಲ್‌ ಜಿಲ್ಲೆ​ಯಲ್ಲಿ ಭಾನುವಾರ ರಾತ್ರಿ ನಡೆ​ದಿ​ದೆ. ಧರ್ಮೇಂದ್ರ ಶುಕ್ಲಾ, ಧರ್ಮು​ಸಿಂಗ್‌ ಲಾಂಜೀ​ವರ್‌ ಮತ್ತು ಲಲಿತ್‌ ಬರಾ​ಸ್ಕರ್‌ ಹಲ್ಲೆ​ಗೊ​ಳ​ಗಾ​ದ​ವ​ರು.

ಶನಿ​ವಾರ ರಾತ್ರಿ ನೇವ​ಲ್‌​ಸಿಂಗ್‌ ಗ್ರಾಮದತ್ತ ಮಕ್ಕಳ ಕಳ್ಳರು ಕಾರಿನಲ್ಲಿ ಆಗ​ಮಿ​ಸು​ತ್ತಿ​ದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನೇ ನಂಬಿದ ಗ್ರಾಮ​ಸ್ಥರು ಗ್ರಾಮದ ಬಳಿ ರಸ್ತೆ​ಗೆ ಅಡ್ಡ​ವಾಗಿ ಮರ ಕಡಿದು ಹಾಕಿ ಮಕ್ಕಳ ಕಳ್ಳ​ರಿ​ಗಾಗಿ ಕಾಯು​ತ್ತಿ​ದ್ದರು. ಆದರೆ ಅದೇ ವೇಳೆಗೆ ಅಲ್ಲಿಗೆ ಕಾಂಗ್ರೆಸ್‌ ನಾಯ​ಕರು ಕಾರಿ​ನಲ್ಲಿ ಬಂದಿದ್ದು, ಮರ ಕಡಿದು ರಸ್ತೆ ಅಡ್ಡ ಹಾಕಿ​ದ್ದನ್ನು ಡಕಾ​ಯಿ​ತರ ಕೃತ್ಯ ಇರ​ಬ​ಹುದು ಎಂದು ಅಂದಾ​ಜಿ​ಸಿ ಅಲ್ಲಿಂದ ತಮ್ಮ ಕಾರು ಹಿಂದಿ​ರು​ಗಿ​ಸಿ​ಕೊಂಡು ವಾಪಸ್‌ ಹೊರ​ಟಿ​ದ್ದರು.

ಆದರೆ ಇವ​ರನ್ನು ಬೆನ್ನ​ಟ್ಟಿದ ಗ್ರಾಮ​ಸ್ಥರು ಅವರ ಕಾರನ್ನು ಜಖಂಗೊ​ಳಿಸಿ ಮೂವರೂ ನಾಯ​ಕ​ರನ್ನು ಥಳಿ​ಸಿ​ದ್ದಾರೆ. ನಂತರ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಆಗ​ಮಿ​ಸಿದ ಪೊಲೀ​ಸರು ಇವ​ರನ್ನು ಆಸ್ಪ​ತ್ರೆಗೆ ದಾಖ​ಲಿ​ಸಿ​ದ್ದಾರೆ.