ಬೆಂಗಳೂರು [ಜು.29]: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟುಕ್ಷೀಣಿಸಿದೆ. ಆದರೆ, ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ಮೂರು ಸೇತುವೆಗಳು ಜಲಾವೃತವಾಗಿವೆ.

ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಲ್ಲೋಳ-ಯಡೂರ ಸೇತುವೆ. ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ ಜಲಾವೃತಗೊಂಡ ಸೇತುವೆಗಳು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಮಳೆ ಗಾಳಿಗೆ ಮನೆಯೊಂದು ನೆಲಸಮಗೊಂಡ ಪರಿಣಾಮ ಮೂವರು ವ್ಯಕ್ತಿ​ಗಳು, ಐದು ಜಾನುವಾರು ತೀವ್ರ ಗಾಯಗೊಂಡಿವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುಡ್ಡ ಕುಸಿದು ಗುಡ್ಡದಿಂದ ಹರಿದು ಬಂದ ನೀರು ಹಳದೀಪುರದ ಕೆರೆಗದ್ದೆ ಕೃಷ್ಣಾಶ್ರಮ ಮಠಕ್ಕೆ ನುಗ್ಗಿ ಮಠದ ಗೋಡೆ ಕುಸಿದಿದೆ. ಮಠದ ವಾಮನಾಶ್ರಮ ಶ್ರೀಗಳು ಗೋವಾದಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದರಿಂದ ಮಠದಲ್ಲಿ ಭಕ್ತರು ಇರಲಿಲ್ಲ. ಅರ್ಚಕರು ಸೇರಿದಂತೆ ಬೆರಳೆಣಿಕೆಯಷ್ಟುಜನರಿದ್ದರು. ಯಾರಿಗೂ ಅಪಾಯ ಉಂಟಾಗಿಲ್ಲ.

ಕೊಡಗು ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಬಿಸಿಲಿನ ವಾತಾವರಣ ಕಂಡು ಬಂತು. ಗದಗ, ಹಾವೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಲ್ಪ ಮಳೆಯಾಗಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಾಗರ ಗ್ರಾಮದಲ್ಲಿ ಸಂಜೆ ಸುರಿದ ಮಳೆ ಆವಾಂತರ ಸೃಷ್ಟಿಸಿತ್ತು. ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂತೆ ಅಸ್ತವ್ಯಸ್ತವಾಗಿತ್ತು. ಮಳೆ ನೀರು ನುಗ್ಗಿ ರೈತರು ವ್ಯಾಪಾರಕ್ಕೆ ತಂದಿದ್ದ ಕಾಳು, ತರಕಾರಿಗಳು ನೀರಿನಲ್ಲಿ ತೇಲುವಂತಾಗಿತ್ತು.