ಅನಿಲ್ ಭಾರದ್ವಾಜ್. ಫೀನಿಕ್ಸ್. ಯುಎಸ್‌ಎ

ಶಿಕಾಗೋ: ವಿಶ್ವ ಹಿಂದೂ ಸಮ್ಮೇಳನದ ಹಿಂದೂ ಮಾಧ್ಯಮ ಕಾರ್ಯಾಗಾರದಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ, ಮಧುರ್ ಭಂಢಾರಕರ್, ಹಿರಿಯ ಸಿನಿಮಾ ನಿರ್ಮಾಪಕ ಅಮಿತ್ ಖನ್ನಾ ಭಾಗವಹಿಸಿದ್ದರು. 

ಅರ್ಬನ್ ನಕ್ಸಲಿಸಂ ಕುರಿತು ಬುದ್ಧ ಇನ್ ಎ ಟ್ರಾಫಿಕ್ ಜಾಮ್’ ಸಿನಿಮಾ ಮಾಡಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿರುವ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ಇಂದಿನ ಭಾರತದ ಸಿನಿಮಾಗಳಲ್ಲಿ ಭಾರತವೇ ಇಲ್ಲ. ಭಾರತೀಯತೆಯೂ ಇಲ್ಲ. ನಮ್ಮ ಸಿನಿಮಾಗಳಲ್ಲಿ ಮೊದಲಿಗೆಲ್ಲ ಹಳ್ಳಿಗಳಲ್ಲಿನ ಜಮೀನ್ದಾರರ ಶೋಷಣೆ ಅದರ ವಿರುದ್ಧ ಹೋರಾಡುವ ಬಡ ರೈತನ ಮಗ ಈ ರೀತಿಯ ಕತೆಗಳೀರುತ್ತಿದ್ದವು. 

ನಂತರದಲ್ಲಿ ಮಿಲ್ಲುಗಳ ಮಾಲಿಕರು ಅವರ ಮಕ್ಕಳ ಶೋಷಣೆ ಅವರ ವಿರುದ್ಧ ಸೆಣೆಸುವ ಕಾರ್ಮಿಕ ಮುಖಂಡ ಈ ಥರದಲ್ಲಿ ಚಿತ್ರಗಳು ಬರುತ್ತಿದ್ದವು. ಆದರೆ ಶಾರುಖ್ ಖಾನ್ ಅಂತಹ ನಾಯಕರಿಗೆ ನಾಯಕಿಯರ ತಂದೆಯೇ ವಿಲನ್ನುಗಳಾಗಿ ಬಿಟ್ಟಿದ್ದಾರೆ. ಇವರು ನಾಯಕಿಯನ್ನು ಪಡೆಯುವ ಹೋರಾಟದಲ್ಲೇ ಜೀವನ ಸವೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ವಿದೇಶಗಳಲ್ಲಿ ನಿರ್ಮಾಣವಾಗುವ ಸಿನಿಮಾಗಳು ಅಲ್ಲಿನ ಜೀವನ ಪದ್ಧತಿಗಳು, ಅವರ ಊರುಕೇರಿ, ಅಲ್ಲಿನ ದೈನಂದಿನ ಪದ್ಧತಿಗಳನ್ನು ಅನಾವರಣ ಮಾಡಿ ಅವರ ನಡುವಿನ ಕಥೆಗಳನ್ನು ಹೇಳುತ್ತವೆ. ಅವುಗಳನ್ನು ನೋಡುವವರು ಆ ದೇಶದ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳುತ್ತಾರೆ. 

ಆದರೆ ಬಾಲಿವುಡ್ ಸಿನಿಮಾಗಳನ್ನು ವಿದೇಶಿಗರು ನೋಡಿದಾಗ ಲಂಡನ್, ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ರಾಷ್ಟ್ರಗಳ ಬಗ್ಗೆ ತಿಳಿದುಕೊಳ್ಳುತ್ತಾರೆಯೇ ಹೊರತು ಅವರಿಗೆ ಭಾರತ ಎಂದರೆ ಅರ್ಥ ಆಗುವುದೇ ಇಲ್ಲ. ಕಾರಣ ಸಿನಿಮಾ ಕಥೆ ಶುರು ಆಗುವುದೇ ಅನಿವಾಸಿ ಭಾರತೀಯನ ಲಂಡನ್ ನ ಬೃಹತ್ ಬಂಗಲೆ ಮನೆಯಿಂದ. 

ಈ ಗೊಂದಲಗಳಿಂದ ನೊಂದು ನಾನು ಬಾಲಿವುಡ್ ಎಂಬ ಪ್ರಭಾವಳಿಯಿಂದ ಹೊರ ಬಂದು ಭಾರತ ಎಂದರೆ ಏನು ಎಂದು ನನ್ನ ಸಿನಿಮಾ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನದಲ್ಲಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿದರು. 

‘ಬುದ್ಧ ಇನ್ ಎ ಟ್ರಾಫಿಕ್ ಜಾಮ್’ ಸಿನಿಮಾ ಮೂಲಕ ಅರ್ಬನ್ ನಕ್ಸಲರನ್ನು ಬಯಲಿಗೆಳೆದಿದ್ದೇನೆ. ನನ್ನ ಹೋರಾಟ ನಿರಂತರ. ಮುಂದಿನ ಐದಾರು ವರ್ಷಗಳ ನನ್ನ ಜೀವನವನ್ನು ಭಾರತ ನಾಗರಿಕತೆ ಮತ್ತು ಇತಿಹಾಸವನ್ನು ಜನತೆಗೆ ತಿಳಿಸುವ ಸಲುವಾಗಿ ಮುಡಿಪಾಗಿಟ್ಟಿದ್ದೇನೆ ಎಂದಾಗ ಸಭೆಯಲ್ಲಿ ಭಾರಿ ಕರತಾಡನ ಕೇಳಿ ಬಂತು. 

ಇದೇ ವೇಳೆ ಎಡಪಂಥೀಯರನ್ನು ತರಾಟೆಗೆ ತೆಗೆದುಕೊಂಡ ವಿವೇಕ್, ನಮ್ಮ ಭಾರತದಲ್ಲಿ ಗಲ್ಲಿಗಲ್ಲಿಗಳಲ್ಲಿ ಒಂದೊಂದು ರಾಜಕೀಯ ಪಕ್ಷ ಹುಟ್ಟಿಕೊಳ್ಳುತ್ತದೆ. ಯಾವುದೋ ದೇಶದ ಮಾವೋ, ಇನ್ನಾವುದೋ ದೇಶದ ಹಿಟ್ಲರ್, ಮತ್ಯಾವುದೋ ದೇಶದ ಚೆಗುವೇರಾ, ಇನ್ನೆಲ್ಲೋ ಹುಟ್ಟಿದ ಕ್ಯಾಷ್ಟ್ರೋ ನಮ್ಮ ಯುವ ಜನಾಂಗಕ್ಕೆ ಮಾದರಿ ನಾಯಕರಾಗುತ್ತಾರೆ. ಸಾಲದ್ದಕ್ಕೆ ಒಬ್ಬ ಮಹಾನಾಯಕ ತನ್ನ ಮಗನಿಗೆ ಸ್ಟಾಲಿನ್ ಎಂದೇ ನಾಮಕರಣ ಮಾಡಿದ್ದಾನೆ ಎಂದು ಕಿಡಿಕಾರಿದರು. 

ನನ್ನ ಭಯ ಏನೆಂದರೆ ನಾಳೆ ಅಕಸ್ಮಾತಾಗಿ ರಾಜಕೀಯ ಮೇಲಾಟದಲ್ಲಿ ಈ ವ್ಯಕ್ತಿ ನಮ್ಮ ಪ್ರಧಾನಿಯಾದರೆ ಏನು ಗತಿ? ಸ್ಟಾಲಿನ್ ನಮ್ಮ ಪ್ರಧಾನಿ ಎಂದು ಹೇಳಿಕೊಳ್ಳುವ ದುರ್ಗತಿ ಭಾರತೀಯರಿಗೆ ಬರಬಾರದು ಎಂದು ವಿವೇಕ್ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಅಮೆರಿಕ ದೇಶ ವಿಶ್ವದ ಅತಿ ಹಳೆಯ ಗಣತಂತ್ರ ರಾಷ್ಟ್ರ ಆಗಿರಬಹುದು. ಇಲ್ಲಿ ಯಾರಾದರೂ ಸ್ಟಾಲಿನ್ ಹಿಟ್ಲರ್, ಚೆಗುವಾರಾ, ಮಾವೋ ಎಂದೋ ಹೆಸರಿಟ್ಟುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ ಅವರು. ಈ ಎಲ್ಲವನ್ನೂ ನಾವು ಸಹಿಸಿಕೊಳ್ಳುತ್ತೇವೆ ಎಂದಾದರೇ ನಿಮ್ಮನ್ನು ಸಹಿಸಿಕೊಳ್ಳುವುದು ದೊಡ್ಡದೇನಲ್ಲ ಎಂದು ಎಡಪಂಥೀಯರ ಕುರಿತು ಲೇವಡಿ ಮಾಡಿದರು.

 

 ಹಿರಿಯ ನಿರ್ಮಾಪಕ, ರಿಲಯನ್ಸ್ ಎಂಟರ್‌ಟೈನ್ಮೆಂಟ್ ಸಂಸ್ಥೆಯ ಮಾಜಿ ಚೇರ್‌ಮನ್ ಅಮಿತ್ ಖನ್ನಾ ಮಾತನಾಡಿ, ಐತಿಹಾಸಿಕ ಸಿನಿಮಾಗಳು, ಪೌರಾಣಿಕ ಸಿನಿಮಾಗಳು ಆಗೆಲ್ಲ ಯೆಥೇಚ್ಚವಾಗಿ ನಿರ್ಮಾಣವಾಗುತ್ತಿದ್ದವು. ಈಗ ಎಡಪಂಥೀರನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕಾದ ಕರ್ಮ ಬಂದೊದಗಿದೆ ಎಂದು ಖೇದ ವ್ಯಕ್ತಪಡಿಸಿದರು. 

ನನ್ನ ಪ್ರಕಾರ ನಾವೆಲ್ಲರೂ ಸರಿ. ಅಂದರೆ ರೈಟ್, ಅವರು ರಾಂಗ್. ಇವರು ಲಿಬರಲ್ಸ್ ಎಂದು ಕರೆದುಕೊಳ್ಳುತ್ತಾರೆ. ಹಾಗಾದರೆ ನಮ್ಮನ್ನೆಲ್ಲ ಯಾರಾರೂ ಕಟ್ಟಿ ಹಾಕಿದ್ದಾರೆಯೇ. ಭಾರತದಲ್ಲಿ ನೀವು ಏನು ಮಾಡಿದ್ದೀರಿ. ಪಶ್ಚಿಮ ಬಂಗಾಳ ರಾಜ್ಯವನ್ನು ಅಭಿವೃದ್ಧಿ ಮಾಡದಂತೆ ತಡೆದು ಅಲ್ಲಿನ ಜನ ಜೀವನದ ಗುಣಮಟ್ಟ ಕುಸಿಯುವಂತೆ ಮಾಡಿದ್ದೀರಿ ಇದೇ ಸಮಾಜಕ್ಕೆ ಎಡಪಂಥದವರ ಕೊಡುಗೆ ಎಂದು ಖನ್ನಾ ತಿವಿದರು. 

ಇನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಮಧುರ್ ಭಂಢಾರಕರ್ ಮಾತನಾಡಿ, ಕ್ಯಾಸೆಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಬಾಲಿವುಡ್ ನಿರ್ದೇಶಕನಾಗಿ, ರಾಷ್ಟ್ರ ಪ್ರಶಸ್ತಿಯನ್ನೂ ಪಡೆದು ಮೇಲೆ ಬಂದಿದ್ದೇನೆ ಎಂದಾದರೆ ಅದು ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ. ಇದಕ್ಕೆ ನಾನೇ ಸಾಕ್ಷಿ ಎಂದರು. 

ನಮ್ಮ ದೇಶದಲ್ಲಿ ನಡೆಯುತ್ತಿರುವುದನ್ನೇ ನಾನು ಜನರಿಗೆ ತೋರಿಸಲು ಬಯಸುತ್ತೇನೆ. ಸಿನಿಮಾ  ರಂಜನೆಯ ಮಾಧ್ಯಮ ಒಪ್ಪಿಕೊಳ್ಳೋಣ. ಆದರೆ ಎಲ್ಲವೂ ರಂಜನೆಯೇ ಆದರೆ ನಮ್ಮ ನಡುವೆ ನಡೆಯುವುದನ್ನು ನಾವು ಅರಿಯುವುದಾದರೂ ಹೇಗೆ. ಅದಕ್ಕೆ ಪೇಜ್ 3, ಜಾಂದಿನಿ ಬಾರ್, ಫ್ಯಾಷನ್, ಇಂದಿರಾ ಸರ್ಕಾರ್ ಅಂತಹ ಸಿನಿಮಾಗಳನ್ನು ಮಾಡಿದ್ದೇನೆ. ಸತ್ಯ ಬಯಲಿಗೆಳೆಯುವುದೇ ನನ್ನ ಕರ್ತವ್ಯ ಎಂದರು.

ಇದೇ ವೇಳೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ನಿರ್ದೇಶನದಲ್ಲಿ ತಯಾರಾದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊನೆಯ ದಿನಗಳ ನಿಗೂಢ ವಿಷಯಗಳನ್ನಾಧರಿಸಿದ ಚಿತ್ರ ‘ದಿ ಟಾಶ್ಕೆಂಟ್ ಫೈಲ್ಸ್’ ಸಿನಿಮಾದ ಕೆಲವು ದೃಶ್ಯಗಳನ್ನು ಬಿಡುಗಡೆ ಮಾಡಿ ಪ್ರದರ್ಶಿಸಲಾಯಿತು. 

 

ಶಿಕಾಗೋದಲ್ಲಿ ಮೊಳಗಿದ ಪಾಂಚಜನ್ಯ: 2ನೇ ವಿಶ್ವ ಹಿಂದೂ ಸಮ್ಮೇಳನಕ್ಕೆ ಚಾಲನೆ!

ಹಿಂದೂಗಳೇ ಒಂದಾಗಿ : ಭಾಗವತ್ ಕರೆ

ಹಿಂದೂ ಸಮ್ಮೇಳನದಲ್ಲಿ ಕಾದಿತ್ತೊಂದು ಅಚ್ಚರಿ