ಶಿಕಾಗೋದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಅಚ್ಚರಿಯೊಂದು ಕಾದಿತ್ತು. ಹಿಂದೂ ಧರ್ಮದ ಅರಿವಿಗಾಗಿ ಪ್ರತಿನಿಧಿಗಳಿಗೆ ಸಿಹಿ ತಿನಿಸಿನ ಪೆಟ್ಟಿಗೆಯನ್ನು ಕಾಣಿಕೆಯಾಗಿ ನೀಡಲಾಯಿತು. ಅದರಲ್ಲಿ ಗಟ್ಟಿ ಮತ್ತು ಮೃದು ಲಡ್ಡು ಇಟ್ಟು ನೀಡಲಾಗಿತ್ತು.
ಶಿಕಾಗೋ: ಇಲ್ಲಿ ನಡೆದಿರುವ ವಿಶ್ವ ಹಿಂದು ಕಾಂಗ್ರೆಸ್‌ನ ಪ್ರತಿನಿಧಿಗಳಿಗೆ ಸಿಹಿ ತಿನಿಸಿನ ಪೆಟ್ಟಿಗೆಯನ್ನು ಕಾಣಿಕೆಯಾಗಿ ನೀಡಲಾಯಿತು. ಅದನ್ನು ಬಿಚ್ಚಿ ನೋಡಿದಾಗ ಪ್ರತಿನಿಧಿಗಳಿಗೆ ಅಚ್ಚರಿ.
ಒಂದು ಕಲ್ಲಿನಂತಹ ಗಟ್ಟಿ ಲಡ್ಡು ಇದ್ದರೆ, ಇನ್ನೊಂದು ಲಡ್ಡು ಮುಟ್ಟಿದರೆ ಸಾಕು ಪುಡಿಪುಡಿಯಾಗಿ ಬಿಡುತ್ತಿತ್ತು. ಪ್ರತಿನಿಧಿಗಳು ಹೀಗೇಕೆ ಎಂದು ಸಂಘಟಕರನ್ನು ಪ್ರಶ್ನಿಸಿದಾಗ ಸಿಕ್ಕ ಉತ್ತರ ಕೂಡ ಅಷ್ಟೇ ಕುತೂಹಲಕಾರಿಯಾಗಿತ್ತು. ಮೆತ್ತನೆಯ ಲಡ್ಡು ಈಗಿನ ಮೃದು ಸ್ವಭಾವದ ಹಿಂದುಗಳ ಸಂಕೇತ. ಹಿಂದುತ್ವದ ಪರಿಸ್ಥಿತಿ ಈಗ ಹೇಗಿದೆ ಎಂಬುದರ ದ್ಯೋತಕ. ಇನ್ನು ಗಟ್ಟಿ ಲಡ್ಡು, ಭವಿಷ್ಯದಲ್ಲಿ ಹಿಂದುತ್ವ ಹಾಗೂ ಹಿಂದುಗಳು ಹೇಗಿರಬೇಕು ಎಂಬುದರ ಸಂಕೇತ ಎಂದು ಸಂಘಟಕಿ ಗುಣಾ ಮಗೇಶನ್ ಹೇಳಿದಾಗ ಸಭಿಕರು ತಲೆದೂಗಿದರು.
ಇಸ್ಕಾನ್ ಅಕ್ಷಯ ಪಾತ್ರೆ ಪ್ರತಿಷ್ಠಾನದ ಮಧುಪಂಡಿತ ದಾಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಹಿಂದುಗಳ ಜನನ ಪ್ರಮಾಣ ಇಳಿಯುತ್ತಿದೆ. ಹೆಚ್ಚು ಮಕ್ಕಳನ್ನು ಹೆರಲು ಹೆಮ್ಮೆ ಪಡಿ’ ಎಂದು ಕರೆ ನೀಡಿದರು.
