ಜಿಎಸ್‌ಟಿ ಸಚಿವರ ಸಮೂಹದ ಅಧ್ಯಕ್ಷ ಮೋದಿ ಕಳವಳ | 96 ಸಾವಿರ ಕೋಟಿ ಬದಲು 95 ಸಾವಿರ ಕೋಟಿ ಸಂಗ್ರಹ ?
ಬೆಂಗಳೂರು: ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ನಂತರ ದೇಶದ 26 ರಾಜ್ಯಗಳಲ್ಲಿ ಆದಾಯದಲ್ಲಿ ಕೊರತೆ ಕಂಡು ಬಂದಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿಯೂ ಆಗಿರುವ ಜಿಎಸ್ಟಿ ಸಚಿವರ ಸಮೂಹದ ಅಧ್ಯಕ್ಷ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದರು.
ಶನಿವಾರ ಖಾಸಗಿ ಹೋಟೆಲ್ನಲ್ಲಿ ಜಿಎಸ್ಟಿ ನೆಟ್’ವರ್ಕ್’ನಲ್ಲಿರುವ ತಾಂತ್ರಿಕ ಸಮಸ್ಯೆ ಪರಿಹಾರದ ಕುರಿತು ಸುಶೀಲ್ ಕುಮಾರ್ ಮೋದಿ ನೇತೃತ್ವದಲ್ಲಿ ಹಲವು ರಾಜ್ಯಗಳ ಪ್ರತಿನಿಧಿಗಳು, ಇನ್ಫೋಸಿಸ್ ಅಧಿಕಾರಿಗಳ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26 ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಅತಿ ಹೆಚ್ಚಿನ ತೆರಿಗೆ ಆದಾಯ ಕೊರತೆ ಕಂಡು ಬಂದಿದ್ದು, 9 ರಾಜ್ಯಗಳಲ್ಲಿ ಕೊರತೆ ಪ್ರಮಾಣ ತುಸು ಕಡಿಮೆ ಇದೆ. ಆದರೆ ದೆಹಲಿಯಲ್ಲಿ ತೆರಿಗೆ ಆದಾಯ ಹೆಚ್ಚಳವಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ತಿಳಿಸಿದರು.
ಹಳೇ ದರಕ್ಕೆ ಮಾರುತ್ತಿದ್ದರೆ ಕ್ರಮ
ಸರಕು ಸೇವೆ ತೆರಿಗೆ ಮಂಡಳಿ ಇತ್ತೀಚೆಗೆ ಸುಮಾರು 200ಕ್ಕೂ ವಸ್ತುಗಳ ಮೇಲಿನ ತೆರಿಗೆ ಇಳಿಸಿದೆ. ಈ ಹಿಂದೆ ಸಂಗ್ರಹವಿರುವ ದರ ಪಟ್ಟಿಯ ಪಕ್ಕದಲ್ಲಿ ಹೊಸ ದರ ಪಟ್ಟಿಯನ್ನು ಹಾಕಬೇಕು. ತೆರಿಗೆ ಇಳಿಸದೆ ಹಳೆಯ ದರಕ್ಕೆ ಮಾರಾಟ ಮಾಡುತ್ತಿದ್ದರೆ ಈ ಬಗ್ಗೆ ಗ್ರಾಹಕರು ರಾಜ್ಯ ಪರಿಶೀಲನಾ ಸಮಿತಿಗೆ ದೂರು ನೀಡಬಹುದು. ಗ್ರಾಹಕರಿಗೆ ಲಾಭ ವರ್ಗಾಯಿಸದ ಉತ್ಪಾದಕರಿಗೆ ಕಠಿಣ ಶಿಕ್ಷೆಯಾಗಲಿದೆ.
ಸುಶೀಲ್ ಕುಮಾರ್ ಮೋದಿ,
ಜಿಎಸ್ಟಿ ಸಚಿವರ ಸಮೂಹದ ಅಧ್ಯಕ್ಷ
2016-17ನೇ ಸಾಲಿನಲ್ಲಿ ರಾಜ್ಯ ಮತ್ತು ಕೇಂದ್ರದ ಒಟ್ಟು ತೆರಿಗೆ ಆದಾಯ ₹ 8.8 ಲಕ್ಷ ಕೋಟಿ ಇತ್ತು. ಪ್ರತಿ ವರ್ಷ ಶೇ.14 ತೆರಿಗೆ ಆದಾಯ ಅಭಿವೃದ್ಧಿ ಒಟ್ಟು ಲೆಕ್ಕ ಹಾಕಿದರೆ ಈ ಪ್ರಮಾಣ 2017-18ರಲ್ಲಿ ₹ 11.5 ಲಕ್ಷ ಕೋಟಿ ಸಂಗ್ರಹವಾಗಬೇಕು. ಅಂದರೆ ಪ್ರತಿ ತಿಂಗಳಿಗೆ 96 ಸಾವಿರ ಕೋಟಿ ರೂ. ತೆರಿಗೆ ನಿರೀಕ್ಷಿಸಲಾಗಿತ್ತು. ಜಿಎಸ್ಟಿ ಜಾರಿ ನಂತರದ ಮೂರು ತಿಂಗಳಲ್ಲಿ ಪ್ರತಿ ತಿಂಗಳು ಸರಾಸರಿ 92-95 ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಆಗಸ್ಟ್ನಲ್ಲಿ ಶೇ.28.4ರಷ್ಟಿದ್ದ ರಾಜ್ಯಗಳ ಸರಾಸರಿ ತೆರಿಗೆ ಆದಾಯ ಕೊರತೆ ಅಕ್ಟೋಬರ್ ತಿಂಗಳಲ್ಲಿ ಶೇ.17.6ಕ್ಕೆ ಇಳಿಕೆಯಾಗಿದೆ.
ಸೆಪ್ಟೆಂಬರ್ನಲ್ಲಿ 93,141 ಕೋಟಿ ಸಂಗ್ರಹವಾದರೆ, ಅಕ್ಟೋಬರ್ನಲ್ಲಿ 95,131 ಕೋಟಿ ಸಂಗ್ರಹವಾಗುವ ಮೂಲಕ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.
ನ.21ರೊಳಗೆ ತಂತ್ರಾಂಶ ಸಮಸ್ಯೆ ಇತ್ಯರ್ಥ: 3ಬಿ ಫಾರಂ ಸಮಸ್ಯೆಯಿಂದ ಸಮ್ಮರಿ ರಿಟರ್ನ್ಗೆ ಅಡಚಣೆ ಯಾಗಿದೆ. ಇದರಿಂದ ಸುಮಾರು 2 ಲಕ್ಷ ಮರುಪಾವತಿ ಪತ್ರಗಳು ಸಲ್ಲಿಕೆಯಾಗದೆ ಉಳಿದಿವೆ. ಈ ಸಮಸ್ಯೆಯನ್ನು ನ.21ರೊಳಗಾಗಿ ಬಗೆಹರಿಸಲಾಗುವುದು. ಜಿಎಸ್ಟಿ ನೆಟ್ವರ್ಕ್ನಲ್ಲಿ ಎಡಿಟಿಂಗ್, ಪ್ರಿವ್ಯೆವ್, ಡೌನ್ ಲೋಡ್, ಎಕ್ಸೆಲ್ ಮಾದರಿಯಲ್ಲಿ ಡೇಟಾ, ಸ್ಪೆಸಿಫಿಕ್ ಎರರ್ ಸಂದೇಶ ಅಳವಡಿಸಲಾಗುವುದು. ಈ ಮೂಲಕ ತೆರಿಗೆ ಮರುಪಾವತಿ ಸರಳವಾಗಲಿದೆ ಎಂದರು.
