ಶ್ರೀನಗರ [ಆ.02]: ಇತ್ತಿಚೆಗಷ್ಟೇ ಜಮ್ಮು- ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತೆಗಾಗಿ 10 ಸಾವಿರ ಯೋಧರನ್ನು ಕಳುಹಿಸಿಕೊಟ್ಟಿದ್ದ ಕೇಂದ್ರ ಸರ್ಕಾರ ಇದೀಗ 25,000ಕ್ಕೂ ಹೆಚ್ಚು ಅರೆ ಸೇನಾ ಪಡೆಯ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. 

ಗುರುವಾರ ಮುಂಜಾನೆಯಿಂದ ಸೇನಾ ತುಕಡಿಗಳು ಆಗಮಿಸುತ್ತಿದ್ದು, ವಿವಿಧ ಭಾಗಗಳಿಗೆ ನಿಯೋಜಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಡಿಢೀರನೆ ಅತಿಯಾದ ಸೇನಾ ಜಮಾವಣೆ ಕಾಶ್ಮೀರದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ನಾಯಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ವಿಸ್ತೃತ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಚರ್ಚಿಸಲಾದ ಅಂಶಗಳು ಬಹಿರಂಗವಾಗಿಲ್ಲವಾದರೂ, ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆ.15ರ ಬಳಿಕ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ.15ಕ್ಕೆ ಅಮರನಾಥ ಯಾಥ್ರೆ ಮುಕ್ತಾಯಗೊಳ್ಳಲಿದ್ದು, ಬಳಿಕ ಕೇಂದ್ರದಿಂದ ದೊಡ್ಡ ಮಟ್ಟದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

- ರಾಜ್ಯವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಚುನಾವಣೆ ನಡೆಸುವ ಸಾಧ್ಯತೆ

- ಕಾಶ್ಮೀರದ ಜನರಿಗೆ ವಿಶೇಷ ಸೌಲಭ್ಯ ನೀಡುವ ಸಂವಿಧಾನದ ಪರಿಚ್ಛೇದ 35ಎ ರದ್ದು

- ಜಮ್ಮು- ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಸಾಧ್ಯತೆ

- ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್‌- ಸೆಪ್ಟೆಂಬರ್‌ನಲ್ಲಿ ಚುನಾವಣೆ ಘೋಷಣೆ ಹಿನ್ನೆಲೆ