ಕಾಶ್ಮೀರ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಜೈಶ್ ಸಂಘಟನೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಯುವಕರು ತೆರಳುತ್ತಿದ್ದಾರೆ. ಕಾಶ್ಮೀರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯುವಕರು ಸೇನೆ ಸೇರಲು ಸಜ್ಜಾಗಿದ್ದಾರೆ. 

ಬಾರಾಮುಲ್ಲಾದಲ್ಲಿ 111 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 2500 ಯುವಕರು ಪಾಲ್ಗೊಂಡಿದ್ದರು. ಇನ್ನು ದೈಹಿಕ ಪರೀಕ್ಷೆಗೆ 6000ಕ್ಕೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಫೆ.22ರವರೆಗೆ ದೈಹಿಕ ಪರೀಕ್ಷೆ ನಡೆಯಲಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಫೆ. 19ರಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಬಾರಾಮುಲ್ಲಾ, ಕುಪ್ವಾರ, ಬಂಡಿಪೋರಾ ಸೇರಿದಂತೆ ವಿವಿಧೆಡೆಯಿಂದ ಯುವಕರು ಆಗಮಿಸುತ್ತಿದ್ದಾರೆ. ಪುಲ್ವಾಮ ದಾಳಿಯ ಬಳಿಕ ಸೇನೆ ಸೇರಿ ದೇಶ ಸೇವೆ ಮಾಡುವ ಉತ್ಸಾಹ ಯುವಕರಲ್ಲಿ ಹೆಚ್ಚಿದೆ ಎಂದು ಕಮಾಂಡಿಂಗ್ ಆಫಿಸರ್ ಕರ್ನಲ್ ವೇದ್ ಬೆನಿವಾಲ್ ಹೇಳಿದ್ದಾರೆ. 

ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ ಇದ್ದು, ಇದರ ನಡುವೆಯೂ ಅತ್ಯತ್ಸಾಹದಿಂದ ಯುವಕರು ಸೇನಾ ನೇಮಕಾತಿ  ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.