ನಗರದ ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಸಲುವಾಗಿ ಬಿಬಿಎಂಪಿ ಬಿಡುಗಡೆ ಮಾಡಿರುವ `ಫಿಕ್ಸ್ ಮೈ ಸ್ಟ್ರೀಟ್' ಎಂಬ ಮೊಬೈಲ್ ಆ್ಯಪ್ ಮೂಲಕ ನಾಲ್ಕೇ ದಿನಗಳಲ್ಲಿ 2021 ದೂರುಗಳು ಸಲ್ಲಿಕೆಯಾಗಿವೆ.

ಬೆಂಗಳೂರು (ಡಿ.15): ನಗರದ ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಸಲುವಾಗಿ ಬಿಬಿಎಂಪಿ ಬಿಡುಗಡೆ ಮಾಡಿರುವ `ಫಿಕ್ಸ್ ಮೈ ಸ್ಟ್ರೀಟ್' ಎಂಬ ಮೊಬೈಲ್ ಆ್ಯಪ್ ಮೂಲಕ ನಾಲ್ಕೇ ದಿನಗಳಲ್ಲಿ 2021 ದೂರುಗಳು ಸಲ್ಲಿಕೆಯಾಗಿವೆ. ಈ ದೂರುಗಳ ಪೈಕಿ 34 ದೂರುಗಳಿಗೆ ಬಿಬಿಎಂಪಿ ಅಕಾರಿಗಳಿಂದ ತಕ್ಷಣದ ಪರಿಹಾರವೂ ದೊರೆತಿದೆ.

ವಲಯವಾರು ದೂರುಗಳ ಮಾಹಿತಿ ಪ್ರಕಾರ, ಬೊಮ್ಮನಹಳ್ಳಿ ವಲಯದಲ್ಲಿ 466, ದಾಸರಹಳ್ಳಿ ವಲಯದಲ್ಲಿ 77, ಪೂರ್ವದಲ್ಲಿ 384, ರಾಜರಾಜೇಶ್ವರಿ ನಗರ 213, ದಕ್ಷಿಣದಲ್ಲಿ 275, ಪಶ್ಚಿಮ ವಲಯ 217 ಮತ್ತು ಯಲಹಂಕ ವಲಯದಲ್ಲಿ 190 ದೂರುಗಳನ್ನು ನಾಗರಿಕರು ಆ್ಯಪ್ ಮೂಲಕ ದಾಖಲಿಸಿದ್ದಾರೆ.

ಇದರಲ್ಲಿ ರಾಜರಾಜೇಶ್ವರಿ ನಗರದಲ್ಲಿ 17 ದೂರುಗಳಿಗೆ ತಕ್ಷಣ ಸ್ಪಂದಿಸಿರುವ ಅಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ ದೂರುಗಳು ಸಂಬಂಧ ಪಟ್ಟ ಅಕಾರಿಗಳಿಗೆ ವರ್ಗಾಯಿಸಲಾಗಿದ್ದು ಪರಿಶೀಲನೆಯಲ್ಲಿವೆ ಎಂದು ತಿಳಿದು ಬಂದಿದೆ.

ಮಧ್ಯೆ, ಗೂಗಲ್ ಪ್ಲೇಸ್ಟೋರ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬ ದೂರುಗಳೂ ಸಾರ್ವಜನಿಕರಿಂದ ಕೇಳಿಬಂದಿದ್ದು, ನಾಲ್ಕೇ ದಿನದಲ್ಲಿ ಆ್ಯಪ್ ಅಪ್ಡೇಟ್ ಕೇಳುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೊಸ ಯೋಜನೆ ಜಾರಿಯಾದಾಗ ಸಮಸ್ಯೆಗಳು ಇರುತ್ತವೆ. ಸಮಸ್ಯೆ ಸರಿಪಡಿಸಲಾಗುತ್ತಿದೆ. ದೂರುಗಳು ನಿಧಾನವಾಗಿ ಏರಿಕೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.