ಇನ್ನೇನು ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ವ್ಯಕ್ತಪಡಿಸಿದ್ದಾರೆ. 

ಲಂಡನ್‌: 2019ರ ಲೋಕಸಭೆ ಚುನಾವಣೆಯಲ್ಲಿ ಇತರ ಪಕ್ಷಗಳ ಜೊತೆ ಮಹಾ ಮೈತ್ರಿ ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಂಡನ್‌ನ ಹೌಸ್‌ ಆಫ್‌ ಕಾಮರ್ಸ್‌ನ ಆವರಣದಲ್ಲಿ ಆಯೋಜಿಸಿದ್ದ ‘ಭಾರತ ಮತ್ತು ವಿಶ್ವ’ ಎಂಬ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌, 2019ರ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಸಿದ್ಧಾಂತವಾದದ ಬದಲು ನಾವು ದೇಶವನ್ನು ಒಂದಾಗಿ ಮುನ್ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ, 1984ರ ಸಿಖ್‌ ಗಲಭೆಯಲ್ಲಿ ಕಾಂಗ್ರೆಸ್‌ ಪಕ್ಷ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ಅದೊಂದು ದುರಂತ ಹಾಗೂ ನೋವಿನ ಸಂಗತಿ. ಆದರೆ, ಗಲಭೆಯಲ್ಲಿ ಕಾಂಗ್ರೆಸ್‌ ಭಾಗಿಯಾಗಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದರು.

ಇದೇ ವೇಳೆ ಐಸಿಸ್‌ ಉಗ್ರರ ಕುರಿತು ತಾವು ನೀಡಿದ ಹೇಳಿಕೆಯನ್ನು ಬಿಜೆಪಿ ತಪ್ಪಾಗಿ ಅರ್ಥೈಸಿದೆ. ತಾವು ಏನೇ ಹೇಳಿದರೂ ಅದರ ವಿರುದ್ಧ ಹೇಳಿಕೆ ನೀಡುವ ಪರಿಪಾಠವನ್ನು ಬಿಜೆಪಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.