ನವದೆಹಲಿ : ಕಳೆದ ಜನವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರವು 2018ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಒಟ್ಟು 84 ಮಂದಿ ಸಾಧಕರನ್ನು ಆಯ್ಕೆ ಮಾಡುವ ವೇಳೆ ಕರ್ನಾಟಕ ಸರ್ಕಾರದಿಂದ ಹೋಗಿದ್ದ ಎಲ್ಲ 44 ಹೆಸರುಗಳನ್ನೂ ತಿರಸ್ಕರಿಸಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕೇವಲ ಕರ್ನಾಟಕದ್ದಷ್ಟೇ ಅಲ್ಲ, ಒಟ್ಟು 8 ರಾಜ್ಯ ಸರ್ಕಾರಗಳ, 7 ರಾಜ್ಯಪಾಲರ ಹಾಗೂ 14 ಕೇಂದ್ರ ಸಚಿವರ ಒಂದೂ ಶಿಫಾರಸನ್ನು ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರಶಸ್ತಿಗೆ ಪರಿಗಣಿಸಿಲ್ಲ. ಈ ಸಾಲಿನ ಪದ್ಮ ಪ್ರಶಸ್ತಿಗೆ ಒಟ್ಟು 35,595 ನಾಮ ನಿರ್ದೇಶನಗಳು ಬಂದಿದ್ದವು. ಅವುಗಳಲ್ಲಿ ಕೆಲವನ್ನು ಮಾತ್ರ ಅಂಗೀಕರಿಸಿರುವ ಕೇಂದ್ರ ಸರ್ಕಾರ, ಇನ್ನುಳಿದವರನ್ನು ತನ್ನ ಶೋಧನಾ ಸಮಿತಿಯ ಮೂಲಕವೇ ಆಯ್ಕೆ ಮಾಡಿದೆ ಎಂದು ಗೃಹ ಸಚಿವಾಲಯದಿಂದ ಸುದ್ದಿ ಸಂಸ್ಥೆಗೆ ದೊರಕಿದ ದಾಖಲೆಗಳು ಹೇಳುತ್ತವೆ.

ಈ ವರ್ಷದ ಪದ್ಮ ಪ್ರಶಸ್ತಿಗೆ ಜ.25ರಂದು ಹೆಸರುಗಳು ಪ್ರಕಟವಾದಾಗ ಎಲ್ಲರೂ ಎಲೆಮರೆಯ ಕಾಯಿಯಂತಿರುವ ಸಾಧಕರಾಗಿದ್ದು, ಅತ್ಯಂತ ಯೋಗ್ಯರನ್ನೇ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು. ಮಾಚ್‌ರ್‍ 20 (ಮಂಗಳವಾರ) ಹಾಗೂ ಏಪ್ರಿಲ್‌ 2ರಂದು ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕೇಂದ್ರ ಸರ್ಕಾರ ಒಂದೂ ಶಿಫಾರಸನ್ನು ಒಪ್ಪಿಕೊಳ್ಳದ ರಾಜ್ಯ ಸರ್ಕಾರಗಳ ಪಟ್ಟಿಯಲ್ಲಿ ತಮಿಳುನಾಡು, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಉತ್ತರಾಖಂಡ, ಬಿಹಾರ, ರಾಜಸ್ಥಾನ ಹಾಗೂ ದೆಹಲಿ ಇವೆ. ವಿಶೇಷವೆಂದರೆ ಈ ಎಲ್ಲ ರಾಜ್ಯಗಳೂ 5-6 ಹೆಸರುಗಳನ್ನು ಶಿಫಾರಸು ಮಾಡಿದ್ದರೆ, ಕರ್ನಾಟಕದಿಂದ 44 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

ಇನ್ನು, ಕೇಂದ್ರ ಸರ್ಕಾರ ಒಂದೂ ಶಿಫಾರಸನ್ನು ಒಪ್ಪಿಕೊಳ್ಳದ ಕೇಂದ್ರ ಸಚಿವರ ಪಟ್ಟಿಯಲ್ಲಿ ಅರುಣ್‌ ಜೇಟ್ಲಿ, ಮನೇಕಾ ಗಾಂಧಿ, ಪ್ರಕಾಶ್‌ ಜಾವಡೇಕರ್‌, ರಾಮ್‌ ವಿಲಾಸ್‌ ಪಾಸ್ವಾನ್‌, ಸುರೇಶ್‌ ಪ್ರಭು, ಥಾವರ್‌ ಚಂದ್‌ ಗೆಹ್ಲೊಟ್‌ ಮುಂತಾದವರಿದ್ದಾರೆ. ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಕಳಿಸಿದ್ದ ಎರಡೂ ಹೆಸರನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಮಹಾರಾಷ್ಟ್ರ, ಅಸ್ಸಾಂ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ ರಾಜ್ಯಗಳು ಕಳಿಸಿದ್ದ ಸರಾಸರಿ ಹತ್ತಾರು ಹೆಸರುಗಳ ಪೈಕಿ ತಲಾ ಒಬ್ಬರಿಗೆ ಮಾತ್ರ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿದೆ.