2017ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ‘ಶುದ್ಧಿ’ಗೆ ಅತ್ಯುತ್ತಮ ಚಿತ್ರ, ‘ಮಂಜರಿ’ ಚಿತ್ರದ ನಾಯಕ ನಟ ವಿಶೃತ್ ನಾಯ್ಕಗೆ ಅತ್ಯುತ್ತಮ ನಟ ಹಾಗೂ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ಅಭಿನಯಕ್ಕಾಗಿ ತಾರಾ ಅನೂರಾಧಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರು : ಕಳೆದ 2017ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ‘ಶುದ್ಧಿ’ಗೆ ಅತ್ಯುತ್ತಮ ಚಿತ್ರ, ‘ಮಂಜರಿ’ ಚಿತ್ರದ ನಾಯಕ ನಟ ವಿಶೃತ್ ನಾಯ್ಕಗೆ ಅತ್ಯುತ್ತಮ ನಟ ಹಾಗೂ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ಅಭಿನಯಕ್ಕಾಗಿ ತಾರಾ ಅನೂರಾಧಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ವಿಧಾನಸೌಧದಲ್ಲಿ ಗುರುವಾರ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಎನ್.ಎಸ್.ಶಂಕರ್ ಅವರು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ವಿವರ ಪ್ರಕಟಿಸಿದರು.
ಪ್ರಶಸ್ತಿಗಾಗಿ 121 ಚಲನಚಿತ್ರ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಅರ್ಹತೆ ಹೊಂದಿದ್ದ ಒಟ್ಟು 121 ಚಲನಚಿತ್ರಗಳನ್ನು ಆಯ್ಕೆ ಸಮಿತಿಯು ವೀಕ್ಷಿಸಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಎರಡನೇ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ತುಳುವಿನ ‘ಪಡ್ಡಾಯಿ’ ಮೂರನೇ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ‘ಹೆಬ್ಬೆಟ್ ರಾಮಕ್ಕ’ ವಿಶೇಷ ಸಾಮಾಜಿಕ ಕಾಳಜಿ ಚಿತ್ರವೆಂದು ಆಯ್ಕೆ ಮಾಡಿದ್ದು, ‘ರಾಜಕುಮಾರ’ ಅತ್ಯುತ್ತಮ ಮನರಂಜನಾ ಚಿತ್ರ ಎಂದು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮೊದಲ ಅತ್ಯುತ್ತಮ ಚಿತ್ರ ‘ಶುದ್ಧಿ’ ನಿರ್ಮಾಪಕ ಮಾದೇಶ್ ಟಿ.ಭಾಸ್ಕರ್, ನಿರ್ದೇಶಕ ಆದಶ್‌ರ್ ಎಚ್.ಈಶ್ವರಪ್ಪ, 2ನೇ ಅತ್ಯುತ್ತಮ ಚಿತ್ರ ‘ಮಾಚ್‌ರ್ 22’ ನಿರ್ಮಾಪಕ ಹರೀಶ್ ಶೇರ್‌ಗಾರ್, ನಿರ್ದೇಶಕ ಕೂಡ್ಲು ರಾಮಕೃಷ್ಣ ಮತ್ತು 3ನೇ ಅತ್ಯುತ್ತಮ ಚಿತ್ರ ‘ಪಡಾಯಿ’ ನಿರ್ಮಾಪಕ ನಿತ್ಯಾನಂದ ಪೈ, ನಿರ್ದೇಶಕ ಅಭಯ್ ಸಿಂಹ, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ‘ಹೆಬ್ಬೆಟ್ ರಾಮಕ್ಕ’ ನಿರ್ಮಾಪಕ ಸವಿರಾಜ್ ಸಿನಿಮಾಸ್, ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಪ್ರಶಸ್ತಿ ಪಡೆಯಲಿದ್ದಾರೆ.
ಅಂತೆಯೇ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ‘ರಾಜಕುಮಾರ್’ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್, ನಿರ್ದೇಶಕ ಸಂತೋಷ್ ಆನಂದ ರಾಮ್‌ಗೆ ‘ನರಸಿಂಹ ರಾಜು ಪ್ರಶಸ್ತಿ’, ಅತ್ಯುತ್ತಮ ಮಕ್ಕಳ ಚಿತ್ರ ‘ಎಳೆಯರು ನಾವು ಗೆಳೆಯರು’ ಚಿತ್ರದ ನಿರ್ಮಾಪಕ ಆರ್.ನಾಗರಾಜ್, ನಿರ್ದೇಶಕ ವಿಕ್ರಂ ಸೂರಿ, ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಸೋಫಿಯಾ’ (ಕೊಂಕಣಿ)ದ ನಿರ್ಮಾಪಕ ಜೆನಿತ್ ನರೋನಾ, ನಿರ್ದೇಶಕ ಹ್ಯಾರಿ ಫರ್ನಾಂಡಿಸ್ ಹಾಗೂ ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ ‘ಅಯನ’ ಚಿತ್ರಕ್ಕಾಗಿ ನಿರ್ದೇಶಕ ಗಂಗಾಧರ ಸಾಲಿಮಠ ಮತ್ತು ನಿರ್ಮಾಪಕ ಡೀಸ್ ಫಿಲಂಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಾರ್ಷಿಕ ಚಲನಚಿತ್ರ ಪ್ರಶಸ್ತಿ-2017
ಅಯನ- ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ
ಸೋಫಿಯಾ- ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಚಿತ್ರ: ಲಕ್ಷ್ಮೇನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ- ರೇಖಾ (ಚಿತ್ರ: ಮೂಕ ನಾಯಕ)
ಅತ್ಯುತ್ತಮ ಕತೆ: ಹನುಮಂತ ಬಿ.ಹಾಲಿಗೇರಿ (ಚಿತ್ರ: ಕೆಂಗುಲಾಬಿ) ಮತ್ತು ಅಮರೇಶ್ ನುಗಡೋಣಿ (ಚಿತ್ರ: ನೀರು ತಂದವರು)
ಅತ್ಯುತ್ತಮ ಚಿತ್ರಕಥೆ- ವೆಂಕಟ್ ಭಾರದ್ವಾಜ್ (ಚಿತ್ರ: ಕೆಂಪಿರ್ವೆ)
ಅತ್ಯುತ್ತಮ ಛಾಯಾಗ್ರಹಣ- ಸಂತೋಷ್ ರೈ ಪಾತಾಜೆ (ಚಿತ್ರ: ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ- ವಿ.ಹರಿಕೃಷ್ಣ (ಚಿತ್ರ: ರಾಜಕುಮಾರ್)
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಚಿತ್ರ: ಮಫ್ತಿ)
ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್ (ಚಿತ್ರ: ರಾಮರಾಜ್ಯ)
ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಚಿತ್ರ: ಕಟಕ)
ಅತ್ಯುತ್ತಮ ಕಲಾ ನಿರ್ದೇಶನ- ಎಸ್.ಎ.ರವಿ (ಚಿತ್ರ ಹೆಬ್ಬುಲಿ)
ಅತ್ಯುತ್ತಮ ಗೀತ ರಚನೆ- ಜೆ.ಎಂ.ಪ್ರಹ್ಲಾದ್ (ಚಿತ್ರ: ಮಾಚ್‌ರ್ 22)
ಅತ್ಯುತ್ತಮ ಹಿನ್ನೆಲೆ ಗಾಯಕ- ತೇಜಸ್ವಿ ಹರಿದಾಸ್ (ಚಿತ್ರ ಹುಲಿರಾಯ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅಪೂರ್ವ ಶ್ರೀಧರ್ (ಚಿತ್ರ: ದಯವಿಟ್ಟು ಗಮನಿಸಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರೀದರ್ಶನ್ (ಚಿತ್ರ: ಮಹಾಕಾವ್ಯ) ಮತ್ತು ಮಿತ್ರ (ಚಿತ್ರ: ರಾಗ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಕೆ.ಸುರೇಶ್ (ಚಿತ್ರ: ಹೆಬ್ಬುಲಿ)
