Asianet Suvarna News Asianet Suvarna News

ಸರಣಿ ಬಾಂಬ್‌ ಸ್ಫೋಟದ ಆರೋಪಿ ಸುಪಾರಿ ಹಂತಕ!

2008ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಲಷ್ಕರ್‌ ಇ-ತೊಯ್ಬಾ ಸಂಘಟನೆಯ ಶಂಕಿತ ಉಗ್ರ ಸುಪಾರಿ ಹಂತಕ ಅನ್ನೋದು ತನಿಖೆಯಿಂದ ಬಹಿರಂಗವಾಗಿದೆ. ಹಿಂದೂ ಯುವಕನ ಕೊಲೆ ಮಾಡಿದ ಸ್ಫೋಟಕ ಮಾಹತಿ ಇದೀಗ ಹೊರಬಿದ್ದಿದೆ.

2008 Bengaluru serial blasts accused makes murder claim
Author
Bengaluru, First Published Oct 24, 2018, 9:42 AM IST

ಬೆಂಗಳೂರು(ಅ.24): ಇತ್ತೀಚಿಗೆ ಸಿಸಿಬಿ ಬಲೆಗೆ ಬಿದ್ದಿದ್ದ 2008ರ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಪಾಕಿಸ್ತಾನ ಮೂಲದ ಲಷ್ಕರ್‌ ಇ-ತೊಯ್ಬಾ ಸಂಘಟನೆಯ ಶಂಕಿತ ಉಗ್ರ ಸಲೀಂ ವಿಚಾರಣೆ ವೇಳೆ ಆರು ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಹಿಂದೂ ಯುವಕನ ಸುಪಾರಿ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.

2012ರಲ್ಲಿ ತಮ್ಮ ಗ್ರಾಮದ ನಿಶಾದ್‌ ಎಂಬುವನನ್ನು ಸಲೀಂ ಹಾಗೂ ಆತನ ಎಂಟು ಮಂದಿ ಸಹಚರರು ಅಪಹರಿಸಿ ಕೊಲೆ ಮಾಡಿದ್ದರು. ಅಂದಿನಿಂದ ಸಣ್ಣದೊಂದು ಸುಳಿವು ಸಿಗದೆ ನಿಗೂಢವಾಗಿದ್ದ ಯುವಕನ ನಾಪತ್ತೆ ಹಿಂದಿನ ರಹಸ್ಯವು ಸಲೀಂ ವಿಚಾರಣೆ ವೇಳೆ ಬಯಲಾಯಿತು. ಈ ವಿಚಾರವನ್ನು ಕೇರಳ ಪೊಲೀಸರಿಗೆ ತಿಳಿಸಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಲಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದ ಸಲೀಂ ಬೆನ್ನಹತ್ತಿದ ಸಿಸಿಬಿ, ಅ.10 ರಂದು ಆತನನ್ನು ಕೇರಳದಲ್ಲಿ ಪಿಣರಾಯಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿತ್ತು. ಘಟನೆ ಸಂಬಂಧ ಆರೋಪಿಯ ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು, ಬಾಂಬ್‌ ವಿಧ್ವಂಸಕ ಘಟನೆ ಬಳಿಕ ಸಲೀಂ ಎಸಗಿದ್ದ ನಿಶಾದ್‌ ಕೊಲೆ ಹಾಗೂ 2016ರಲ್ಲಿ ಕೇರಳದ ಪೆರಂಬಾಯ್‌ನಲ್ಲಿ ದರೋಡೆ ಕೃತ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಸ್ನೇಹಕ್ಕೆ ಯುವಕ ಬಲಿ:
ಶಂಕಿತ ಉಗ್ರ ಸಲೀಂ ಹಾಗೂ ನಿಶಾದ್‌ ಕೇರಳ ರಾಜ್ಯದ ಕಣ್ಣೂರು ಪೆರಂಬಾಯ್‌ ಗ್ರಾಮದವರು. ಬಾಲ್ಯದಿಂದಲೂ ಅವರಿಬ್ಬರು ಸ್ನೇಹಿತರು. ಚಾಲಕನಾಗಿದ್ದ ನಿಶಾದ್‌, ಅದೇ ಊರಿನ ಸಲೀಂ ಸಮುದಾಯದ ಮಹಿಳೆ ಜತೆ ಸ್ನೇಹ ಮಾಡಿದ್ದ. ಈ ವಿಚಾರವು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಆ ಮಹಿಳೆಯ ಪತಿಗೆ ಗೊತ್ತಾಯಿತು. ಅನ್ಯ ಧರ್ಮೀಯನ ಜತೆ ಪತ್ನಿ ಸ್ನೇಹ ಸಂಗತಿ ತಿಳಿದು ಕೆರಳಿದ ಆತ, ನಿಶಾದ್‌ನ ಹತ್ಯೆಗೆ ನಿರ್ಧರಿಸಿದ್ದ. ಆಗ ಸಲೀಂನನ್ನು ಸಂಪರ್ಕಿಸಿದ ಆಕೆಯ ಕುಟುಂಬದವರು, ನಿಶಾದ್‌ ಕೊಲೆಗೆ .25 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು. ಇದಕ್ಕೆ ಒಪ್ಪಿದ ಸಲೀಂ, ತನ್ನ ಸಹಚರ ಮಜೀದ್‌ ಮತ್ತಿತರರ ಜತೆ ಸೇರಿಕೊಂಡು ನಿಶಾದ್‌ನನ್ನು ಅಪಹರಿಸಿ ಕೊಲೆಗೈದು ಹೂತು ಹಾಕಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತ ನಿಶಾದ್‌ ಪೋಷಕರು, ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಪೊಲೀಸರಿಗೆ ನಿಶಾದ್‌ ನಾಪತ್ತೆಯಲ್ಲಿ ಸಲೀಂ ಕೈವಾಡವಿರುವ ಬಗ್ಗೆ ಗುಮಾನಿ ಇತ್ತು. ಆದರೆ ಅರಣ್ಯ ಪ್ರದೇಶದಲ್ಲಿ ಅಜ್ಞಾತವಾಗಿದ್ದ ಸಲೀಂ ಪತ್ತೆಯಾಗಿರಲಿಲ್ಲ. ಇದಾದ ನಂತರ 2016ರಲ್ಲಿ ದರೋಡೆ ಕೃತ್ಯವನ್ನು ಸಲೀಂ ತಂಡವು ಎಸಗಿತ್ತು. ಈಗ ವಿಚಾರಣೆ ವೇಳೆ ಆ ಎರಡು ಪ್ರಕರಣಗಳ ಕುರಿತು ಸಲೀಂ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios