Asianet Suvarna News Asianet Suvarna News

ಕಾಂಗ್ರೆಸ್ ನಲ್ಲೀಗ 20 ಅತೃಪ್ತರ ಗುಂಪು : ಯಾರವರು..?

ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ತೀವ್ರ ಅತೃಪ್ತಿ ಹೊರ ಹಾಕುತ್ತಿರುವ ಎಂ.ಬಿ. ಪಾಟೀಲ್ ನೇತೃತ್ವದ ಸುಮಾರು 20 ಶಾಸಕರ ಗುಂಪು ಕಾಂಗ್ರೆಸ್‌ನೊಳಗೆ ಪ್ರತ್ಯೇಕ ಗುಂಪಿನಂತೆ ವರ್ತಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಜೂ. 11 ರಂದು ಮತ್ತೆ ಸಭೆ ಸೇರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

20 Congress Leaders Unhappy About Karnataka Cabinet Formation

ಬೆಂಗಳೂರು :  ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ತೀವ್ರ ಅತೃಪ್ತಿ ಹೊರ ಹಾಕುತ್ತಿರುವ ಎಂ.ಬಿ. ಪಾಟೀಲ್ ನೇತೃತ್ವದ ಸುಮಾರು 20 ಶಾಸಕರ ಗುಂಪು ಕಾಂಗ್ರೆಸ್‌ನೊಳಗೆ ಪ್ರತ್ಯೇಕ ಗುಂಪಿನಂತೆ ವರ್ತಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಜೂ. 11 ರಂದು ಮತ್ತೆ ಸಭೆ ಸೇರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕತ್ವ ಹಾಗೂ ಜೆಡಿಎಸ್ ನಾಯಕತ್ವ ತಮ್ಮ ಗುಂಪಿನ ಬಗ್ಗೆ ಯಾವ ನಿಲುವು  ತಳೆಯಲಿದೆ ಎಂಬುದನ್ನು ಕಾದು ನೋಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಎಂ.ಬಿ. ಪಾಟೀಲ್ ನೇತೃತ್ವದ ಈ ಗುಂಪು ಹಾಲಿ ಕಾಂಗ್ರೆಸ್ ನಾಯಕತ್ವ ತಮ್ಮೊಂದಿಗೆ ನಡೆದುಕೊಂಡ ರೀತಿ ಬಗ್ಗೆ ತೀವ್ರ ಅಸಮಾಧಾನಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸಂಪುಟ ವಿಸ್ತರಣೆ ವೇಳೆ ಉದ್ದೇಶಪೂರ್ವಕವಾಗಿ ಕೆಲ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಭಾವನೆ ಈ ಗುಂಪಿಗೆ ಇದೆ. 

ಹೀಗಾಗಿ ಎರಡನೇ ಹಂತದಲ್ಲಿ ಸಚಿವ ಸ್ಥಾನ ನೀಡಿದರೂ ಪಕ್ಷದಲ್ಲಿ ತಮ್ಮನ್ನು ಮೂಲೆ ಗುಂಪು ಮಾಡಲಾಗುತ್ತದೆ. ಹೀಗಾಗಿ, ವ್ಯಕ್ತಿಗಳಾಗಿ ಸಚಿವ ಸ್ಥಾನಕ್ಕಾಗಿ ಆಗ್ರಹ ಮಾಡಬಾರದು. ಬದಲಾಗಿ, ತಮ್ಮ ಭಾವನೆಗಳನ್ನು ಒಂದು ಗುಂಪಾಗಿ ಹೈಕಮಾಂಡ್ ಮುಂದಿಡಬೇಕು ಹಾಗೂ ಸಂಪುಟ ವಿಸ್ತರಣೆಗೆ ಅನುಸರಿಸಿದ ಮಾನದಂಡಗಳಿಂದ ಕೆಲ ಶಾಸಕರಿಗೆ ವಿನಾಯ್ತಿ ದೊರಕಿದ್ದು ಏಕೆ ಎಂಬ ಬಗ್ಗೆ ಪ್ರಶ್ನಿಸಬೇಕು ಎಂಬ ತೀರ್ಮಾನಿಸಿದೆ ಎನ್ನಲಾಗಿದೆ. 

ಯಾವ ಮಾನದಂಡ?- ಕೆಲವು ಪ್ರಶ್ನೆಗಳು: ಮೂಲಗಳ ಪ್ರಕಾರ ಈ ಗುಂಪು ಸಚಿವ ಸಂಪುಟ ವಿಸ್ತರಣೆಗೆ ಅನುಸರಿಸಿರುವ ಮಾನದಂಡಗಳ ಕುರಿತು ಕೆಲ ಪ್ರಶ್ನೆಗಳನ್ನು ರಾಜ್ಯ ನಾಯಕತ್ವದ ಮುಂದಿಟ್ಟಿದೆ. 

1 ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷ ಸಚಿವರಾಗಿದ್ದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ಮಾನದಂಡ ಅನುಸರಿಸುವುದಾಗಿ ಹೇಳಿ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ರಾಮ ಲಿಂಗಾರೆಡ್ಡಿಯಂತಹ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಆದರೆ, ಇದೇ ಮಾನ ದಂಡವನ್ನು ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಕೃಷ್ಣ ಬೈರೇಗೌಡ ಅವರಿಗೆ ಅನ್ವಯಿಸಿಲ್ಲ ಏಕೆ? 

2 ತೀರಾ ಕಿರಿಯರಿಗೆ ಸಚಿವ ಸ್ಥಾನ ಬೇಡ ಎಂದು ಡಾ. ಸುಧಾಕರ್ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಆದರೆ, ಪ್ರಿಯಾಂಕ ಖರ್ಗೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲು ಕಾರಣವೇನು? 

3. ಸಮಾಜದ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲು ಜೆಡಿಎಸ್ ಜತೆ ಚರ್ಚಿಸಿ ಜಾತಿ ಸಮೀಕರಣ ಮಾಡಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಮಗೆ ತಿಳಿಸಲಾಗಿತ್ತು. 

ಆದರೆ, ಜೆಡಿಎಸ್‌ನವರು ಆರಕ್ಕೂ ಹೆಚ್ಚು ಸಚಿವ ಸ್ಥಾನವನ್ನು ಒಕ್ಕಲಿಗರಿಗೆ ನೀಡಲು ಕಾಂಗ್ರೆಸ್ ಒಪ್ಪಿದ್ದು ಹೇಗೆ? ಜೆಡಿಎಸ್ ಒಕ್ಕಲಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ ಎಂಬ ನೆಪದಲ್ಲಿ ಕಾಂಗ್ರೆಸ್‌ನ ಒಕ್ಕಲಿಗರ ಪ್ರಾತಿನಿಧ್ಯ ಕಡಿಮೆ ಮಾಡಲಾಗಿದೆ. ಇದು ಅನ್ಯಾಯವಲ್ಲವೇ?

4. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ಸೇರಿ ಸಂಪುಟದಲ್ಲಿ ನಾಲ್ಕು ಮಂದಿ ಮಾತ್ರ ಲಿಂಗಾಯತರಿಗೆ ಅವಕಾಶ ನೀಡಲಾಗಿದೆ. ರಾಜ್ಯದ ಸಚಿವ ಸಂಪುಟದಲ್ಲಿ ಸದಾ ಲಿಂಗಾಯತರಿಗೆ ಆರಕ್ಕೂ ಹೆಚ್ಚು ಸಚಿವ ಸ್ಥಾನ ನೀಡುವುದು ಸಂಪ್ರದಾಯವಾಗಿತ್ತು. ಇದು ತಪ್ಪಿ ಹೋಗಲು ಕಾಂಗ್ರೆಸ್ ನಾಯಕತ್ವ ಅವಕಾಶ ನೀಡಿದ್ದು ಏಕೆ? ಈ ಪ್ರಶ್ನೆಗಳನ್ನು ಮುಂದು ಮಾಡಿ ತಮ್ಮನ್ನು ಸಮಾಧಾನ ಪಡಿಸಲು ಆಗಮಿಸಿದ ರಾಜ್ಯ ನಾಯಕತ್ವವನ್ನು ಎಂ.ಬಿ. ಪಾಟೀಲ್ ನೇತೃತ್ವದ ಶಾಸಕರ ಗುಂಪು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. 

Follow Us:
Download App:
  • android
  • ios