ಢಾಕಾ[ಸೆ. 01]  ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಮಂತ್ರಿಯೊಬ್ಬರನ್ನು ಗುರಿಯಾಗಿಸಿಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸೈನ್ಸ್ ಲ್ಯಾಬ್ ರಸ್ತೆ ಮಾರ್ಗದಲ್ಲಿ ಸಾಗುತ್ತಿದ್ದ ಸಚಿವರ ಕಾರ್ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯಲ್ಲಿ ಬಾಂಗ್ಲಾದೇಶದ ಸಚಿವ ಬಾಲಬಾಲ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ (ಐಎಸ್‌ಐ) ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

ಸಚಿವರ ಭದ್ರತಾ ಪಡೆ ತಂಡದಲ್ಲಿ ಆರು ಮಂದಿ ಪೊಲೀಸರಿದ್ದರು. ಘಟನೆ ನಡೆದ ಸಮಯದಲ್ಲಿ ಸಚಿವ ಬಾಲಬಾಲ ಅವರು ಬಾಂಗ್ಲಾದೇಶದ ಗಡಿ ಕಾವಲು ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಸಚಿವರ ಕಾರು ಹೋಗುತ್ತಿರುವುದನ್ನು ಗಮನಿಸಿ ಬಾಂಬ್ ಎಸೆಯಲಾಗಿದೆ.

ಭಯೋತ್ಪಾದಕರು ನಡೆಸಿದ ಸ್ಪೋಟದಲ್ಲಿ ಶಹಾಬುದ್ದೀನ್ ಸೇರಿದಂತೆ ಟ್ರಾಫಿಕ್ ಪೊಲೀಸ್ ಅಮೀನುಲ್ ಇಸ್ಲಾಂ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದು ಮಾಹಿತಿ ಕಲೆಹಾಕಲಾಗುತ್ತಿದೆ.