ಅಖ್ತರ್ ಬಳಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಲಭ್ಯವಾಗಿವೆ ಎಂದು ಪೊಲೀಸರು ಹೇಳಿದ್ದಾರೆ

ನವದೆಹಲಿ (ಅ.27): ಬೇಹುಗಾರಿಕೆ ನಡೆಸಿರುವ ಆರೋಪದಲ್ಲಿ ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದ ಪಾಕಿಸ್ತಾನ್ ಹೈಕಮಿಷನ್ ಕಛೇರಿ ಅಧಿಕಾರಿಯನ್ನು 2 ದಿನಗಳೊಳಗೆ ಪಾಕಿಸ್ತಾನಕ್ಕೆ ವಾಪಸಾಗುವಂತೆ ಸೂಚಿಸಲಾಗಿದೆ.

ಇಂದು ಬೆಳಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ದೆಹಲಿಯ ಕ್ರೈಂ ಬ್ರಾಂಚ್ ಅಧಿಕಾರಿಗಳು ಮಹಮೂದ್ ಅಖ್ತರ್ ಎಂಬ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದರು. ಅದೇ ಆರೋಪದಲ್ಲಿ ಇನ್ನಿಬ್ಬರನ್ನು ಬಂಧಿಸಲಾಗಿದೆ.

ಅಖ್ತರ್ ಬಳಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಲಭ್ಯವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಅಖ್ತರ್ ರಾಜತಾಂತ್ರಿಕ ಪಾಸ್’ಪೋರ್ಟ್ ಹೊಂದಿದ್ದು, ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಅಖ್ತರ್ ರಾಜತಾಂತ್ರಿಕ ರಕ್ಷಣೆ ಹೊಂದಿರುವುದರಿಂದ ಬಂಧನದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರನ್ನು ಸಮನ್ಸ್ ಮಾಡಿತ್ತು. ತಮ್ಮ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಬಾಸಿತ್ ವಿರೋಧ ವ್ಯಕ್ತಪಡಿಸಿದ್ದರು.