ಇಬ್ಬರು ಕಾಂಗ್ರೆಸಿಗರು ಬಿಜೆಪಿ ಸೇರುತ್ತಾರೆ ಎನ್ನುವ ವದಂತಿ ಜೋರಾಗಿದ್ದು, ಜಿಲ್ಲೆಯಾದ್ಯಂತ ಹರಡಿತ್ತು. ಇದು ಸತ್ಯವೇ ಎಂಬುದು ಇನ್ನೂ ದೃಡಪಟ್ಟಿಲ್ಲ.

ಚಿಕ್ಕಬಳ್ಳಾಪುರ : ‘ಆಪರೇಷನ್‌ ಕಮಲ’ ವದಂತಿ ಇದೀಗ ಚಿಕ್ಕಬಳ್ಳಾಪುರಕ್ಕೂ ಹಬ್ಬಿದ್ದು, ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಶಾಸಕರು ಗುರುವಾರ ಸಂಜೆ ವಿಮಾನದ ಮೂಲಕ ಮುಂಬೈಗೆ ಹಾರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿ ವ್ಯಾಪಕ ಚರ್ಚೆಗೆ ಕಾರಣವಾಯಿತು.

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್‌ ಮತ್ತು ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಇಬ್ಬರೂ ಆಪರೇಷನ್‌ ಕಮಲದ ಗಾಳಕ್ಕೆ ಸಿಲುಕಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದು ಸತ್ಯವೇ ಅಥವಾ ಕೇವಲ ವದಂತಿಯೇ ಎಂಬುದು ಇನ್ನೂ ದೃಡಪಟ್ಟಿಲ್ಲ.

ಈ ಬಗ್ಗೆ ಕನ್ನಡಪ್ರಭ ಪ್ರತಿನಿಧಿಯೊಂದಿಗೆ ಮಾತನಾಡಿರುವ ಶಾಸಕ ಸುಬ್ಬಾರೆಡ್ಡಿ ಅವರು, ವೈಯಕ್ತಿಕ ಕೆಲಸದಲ್ಲಿ ಬೆಂಗಳೂರಿನಲ್ಲಿಯೇ ಇದ್ದೇನೆ. ಆಪರೇಷನ್‌ ಕಮಲದ ಕುರಿತು ಯಾರೂ ತಮ್ಮನ್ನು ಸಂಪರ್ಕಿಸಿಲ್ಲ. ಸಂಪರ್ಕಿಸಿದರೂ ಹೋಗಲು ಸಿದ್ಧವಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅನುದಾನ ನೀಡದ ಸರ್ಕಾರದ ವಿರುದ್ಧ ಅಸಮಾಧಾನ ಇರುವುದು ಸತ್ಯ ಎಂದು ತಿಳಿಸಿದ್ದಾರೆ.

ಇದೇ ವೇಳೆ ಶಾಸಕ ಸುಧಾಕರ್‌ ಅವರು,‘ನಾನು ಔಟ್‌ ಆಫ್‌ ಸ್ಟೇಷನ್‌ ಹೋಗ್ತಾ ಇದ್ದೀನಿ. ಯಾಕೆ ಹೋಗಬಾರದಾ ಮುಂಬೈಗೆ? ಹೋದರೆ ತಪ್ಪೇನು? ಅಲ್ಲಿ ಬೀಚ್‌ ನೋಡಲು ಹೋಗಬಾರದಾ?’ ಎಂದು ಪ್ರಶ್ನಿಸಿದ್ದಾರೆ. ಆಪರೇಷನ್‌ ಕಮಲವಾ ಇದು ಎಂದು ಕನ್ನಡಪ್ರಭ ಪ್ರತಿನಿಧಿ ಕೇಳಿದ್ದಕ್ಕೆ, ‘ಗೊತ್ತಿಲ್ಲ ನನಗೆ’ ಎಂದಷ್ಟೇ ಹೇಳಿದ್ದಾರೆ.