ಪತ್ನಿ ಪೀಡಿತ ಪುರುಷರನ್ನು ರಕ್ಷಿಸಲು ಪುರುಷರ ಆಯೋಗ?
ದೇಶದಲ್ಲಿ ಮಹಿಳಾ ಹಕ್ಕುಗಳನ್ನು ರಕ್ಷಣೆ ಮಾಡಲು ಮಹಿಳಾ ಆಯೋಗ ಇರುವಂತೆ ಪುರುಷ ಆಯೋಗವನ್ನೂ ಕೂಡ ರಚನೆ ಮಾಡಬೇಕು ಎಂದು ಇಬ್ಬರು ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.
ನವದೆಹಲಿ: ಕಾನೂನನ್ನು ದುರ್ಬಳಕೆಯಿಂದಾಗಿ ಪುರುಷರು ತಮ್ಮ ಪತ್ನಿಯರಿಂದ ಶೋಷಣೆ ಅನುಭವಿಸುತ್ತಿರುವ ಬಗ್ಗೆ ದಾಖಲಾಗುವ ದೂರುಗಳ ಪರಿಶೀಲನೆಗೆ ಆಯೋಗವೊಂದನ್ನು ರಚಿಸಬೇಕು ಎಂದು ಇಬ್ಬರು ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಘೋಷಿ ಕ್ಷೇತ್ರದ ಸಂಸದ ಹರಿನಾರಾಯಣ್ ರಾಜ್‌ಬಹಾರ್ ಮತ್ತು ಹರ್ದೋಯಿ ಸಂಸದ ಅನ್ಷುಲ್ ವರ್ಮಾ ಅವರು ‘ಪುರುಷ ಆಯೋಗ’ಕ್ಕೆ ಬೆಂಬಲ ಪಡೆಯಲು ಸೆ.23ರಂದು ಸಭೆಯೊಂದನ್ನು ಆಯೋಜಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿಯೂ ಹೇಳಿದ್ದಾರೆ.
ಪುರುಷರು ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಹಲವಾರು ಪ್ರಕರಣಗಳು ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಮಹಿಳೆಯರಿಗೆ ನ್ಯಾಯ ಒದಗಿಸಲು ಕಾನೂನುಗಳು ಮತ್ತು ವೇದಿಕೆಗಳಿವೆ. ಆದರೆ, ಪುರುಷರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲ. ಹೀಗಾಗಿ ಪುರುಷರಿಗಾಗಿ ಆಯೋಗವೊಂದನ್ನು ಸ್ಥಾಪಿಸುವ ಅಗತ್ಯವಿದೆ ಎಂದು ರಾಜ್‌ಬಹಾರ್ ಹೇಳಿದ್ದಾರೆ.
ಇದೇ ವೇಳೆ, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶಾರ್ಮಾ, ಎಲ್ಲರಿಗೂ ತಮ್ಮ ಬೇಡಿಕೆಗಳನ್ನು ಇಡುವ ಹಕ್ಕಿದೆ. ಆದರೆ, ಪುರುಷರಿಗಾಗಿ ಆಯೋಗ ರಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.