Asianet Suvarna News Asianet Suvarna News

ತೆರವಾಗಲಿದೆ ಬಿಜೆಪಿಯ 2 ಪರಿಷತ್ ಸದಸ್ಯ ಸ್ಥಾನ

ಇಬ್ಬರು ಬಿಜೆಪಿ ಮುಖಂಡರು ಪರಿಷತ್ ಸ್ಥಾನವನ್ನು ತೊರೆಯುವ ಹಿನ್ನೆಲೆಯಲ್ಲಿ 2 ಸ್ಥಾನ ತೆರವಾಗಲಿದೆ. ಮುಂದಿನ ತಿಂಗಳು ತಾರಾ ಅನುರಾಧಾ ಹಾಗೂ ಶಾಣಪ್ಪ ನಿವೃತ್ತರಾಗಲಿದ್ದಾರೆ. 

2 BJP Leaders Retired From MLC Post Next Month
Author
Bengaluru, First Published Jul 13, 2018, 7:46 AM IST

ವಿಧಾನಪರಿಷತ್‌ :  ಮುಂದಿನ ತಿಂಗಳು 9ರಂದು ಹಿರಿಯರ ಮನೆಯಿಂದ ಬಿಜೆಪಿ ಸದಸ್ಯರ್ದಾ ಕೆ.ಬಿ. ಶಾಣಪ್ಪ ಹಾಗೂ ನಟಿ, ಬಿಜೆಪಿ ಸದಸ್ಯೆ ತಾರಾ ಅನೂರಾಧ ನಿವೃತ್ತರಾಗಲಿದ್ದಾರೆ.  ಈ ಹಿನ್ನೆಲೆಯಲ್ಲಿ ಸದನದ ಸದಸ್ಯರು ಇಬ್ಬರನ್ನೂ ಗುರುವಾರ ಅಭಿನಂದಿಸಿದರು.

ಈ ವೇಳೆ ಶಾಣಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ತಮ್ಮಂತಹ ಸಾಮಾನ್ಯ ವ್ಯಕ್ತಿ ಜನಪ್ರತಿನಿಧಿಯಾಗಿ ಇಂತಹ ಉನ್ನತ ಸ್ಥಾನಕ್ಕೆ ಬರಲು ಸಾಧ್ಯವಾಯಿತು. ಇಂತಹ ವ್ಯವಸ್ಥೆಗೆ ಕಾರಣರಾದ ನಮ್ಮ ಪೂರ್ವಿಕರಿಗೆ ದೊಡ್ಡ ಸಲಾಮು ಎಂದರು.

ಬೇರೆ ಬೇರೆ ಪ್ರದೇಶಗಳ, ಜಾತಿ, ಧರ್ಮಗಳ ಹಿನ್ನೆಲೆಯಿಂದ ನಾವಿಲ್ಲಿಗೆ ಬಂದಿದ್ದರೂ ಒಟ್ಟಾಗಿ ಕುಳಿತು ರಾಜ್ಯದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಇದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ನನ್ನ ಹುಟ್ಟಿದ ದಿನಾಂಕವನ್ನೂ ಸಹ ಬರೆದಿಡಲು ಅರಿವಿಲ್ಲದ ಕುಟುಂಬದಿಂದ ಬಂದ ತಾವು ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯಾಗಲು ಸಾಧ್ಯವಾಯಿತು. 30 ವರ್ಷದ ರಾಜಕೀಯ ಜೀವನದಲ್ಲಿ ಯಾರೂ ಬೆರಳು ತೋರಿಸದಂತೆ ಸಂತೃಪ್ತಿಯಿಂದ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದರು.

ಜನಪರವಾದ ವ್ಯವಸ್ಥೆಯು ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಹಲವು ಮಹನೀಯರ ತ್ಯಾಗ, ಪರಿಶ್ರಮದಿಂದಾಗಿ ಕಟ್ಟಲ್ಪಟ್ಟಿದೆ. ಇದಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬಜೆಟ್‌ ಗಾತ್ರ ಪ್ರತಿ ಸರ್ಕಾರದಲ್ಲೂ ಏರುತ್ತಲೇ ಇದೆ. ಆದರೆ, ಅಭಿವೃದ್ಧಿ ಮಾತ್ರ ಅಲ್ಲೇ ಇದೆ. ಹಾಗಾದರೆ ಹಣ ಎಲ್ಲಿ ಹೋಗುತ್ತಿದೆ. ನಮ್ಮನ್ನು ಇಲ್ಲಿಗೆ ಕಳುಹಿಸಿದವರಿಗೆ ಅಗತ್ಯ ನೆರವು ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಯಾರು ಮರೆಯಬಾರದು ಎಂದು ಹೇಳಿದರು.

1980ದಶಕದಲ್ಲಿ ವೀರೇಂದ್ರ ಪಾಟೀಲ್‌, ನಜೀರ್‌ ಸಾಬ್‌, ಎಂ.ಸಿ.ನಾಣಯ್ಯ, ಜೆ.ಎಚ್‌.ಪಟೇಲ್‌, ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವು ಹಿರಿಯ ಮುತ್ಸದ್ದಿಗಳು ವಿಧಾನಸಭೆ, ವಿಧಾನಪರಿಷತ್‌ನ ಘನತೆಯನ್ನು ಹೆಚ್ಚಿಸಿದ್ದಾರೆ. ಅವರೊಂದಿಗೆ ಒಡನಾಟದಿಂದ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ. ರಾಜಕೀಯ ಜೀವನವು ಕಮ್ಯುನಿಸ್ಟ್‌ ಚಳವಳಿಯಿಂದ ಪ್ರಾರಂಭಗೊಂಡು, ಜನತಾದಳದಲ್ಲಿ ರಾಜಕೀಯ ನೆಲೆಯನ್ನು ಕಂಡೆ. ನಾನು ಕಮ್ಯುನಿಸ್ಟ್‌ ಹಿನ್ನೆಲೆಯಿಂದ ಬಂದಿದ್ದರೂ ಮೊದಲ ಬಾರಿಗೆ ಜೆ.ಎಚ್‌.ಪಟೇಲ್‌ರವರು ಸಚಿವ ಸ್ಥಾನ ನೀಡಿದ್ದರು. ಅಂತಹ ಹೃದಯವಂತರಿಂದ ಸದನವು ಕಳೆಕಟ್ಟುತ್ತಿತ್ತು ಎಂದು ಅವರು ಸ್ಮರಿಸಿದರು.

ನಿವೃತ್ತರಾಗಲಿರುವ ಬಿಜೆಪಿಯ ಮತ್ತೊಬ್ಬ ಸದಸ್ಯೆ ತಾರಾ ಅನೂರಾಧಾ ಮಾತನಾಡಿ, 2012ರಲ್ಲಿ ಬಿಜೆಪಿಯಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ನಂತರ ಗಂಭೀರವಾಗಿ ಓದಲು ಪ್ರಾರಂಭಿಸಿದೆ. ಸಿನಿಮಾದಲ್ಲಿ ಪಾತ್ರಗಳ ಮೂಲಕ ಬೆಳೆಯಲು ಸಾಧ್ಯವಾಗಿದ್ದ ನನಗೆ ವಿಧಾನಪರಿಷತ್‌ ಸದನದ ಕಾರ್ಯಕಲಾಪಗಳು ಇನ್ನಷ್ಟುಬೆಳೆಯಲು ಕಲಿಸಿತು. ಪರಿಷತ್‌ನ ಪ್ರತಿಯೊಬ್ಬ ಹಿರಿಯ ಸದಸ್ಯರು ತಮಗೆ ಮಾರ್ಗದರ್ಶನ ನೀಡಿದ್ದಾರೆ. ಸದನದಲ್ಲಿ ಪ್ರಶ್ನೆಗಳನ್ನು ಕೇಳಿದಾಗ ಇತರೆ ಸದಸ್ಯರು ಪೂರಕವಾಗಿ ಮಾತನಾಡಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು. ಇದು ಮತ್ತಷ್ಟುಪ್ರಶ್ನೆಗಳನ್ನು ಕೇಳುವಂತೆ ನನ್ನನ್ನು ಪ್ರೇರೇಪಿಸಿತು ಎಂದು ಸ್ಮರಿಸಿದರು.

ಆಗಸ್ಟ್‌ನಲ್ಲಿ ಪರಿಷತ್‌ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿರುವ ಕೆ.ಬಿ.ಶಾಣಪ್ಪ ಅವರ ವ್ಯಕ್ತಿತ್ವ ಸದಾ ಮಾದರಿಯಾಗುವಂತಹದ್ದು. ಅವರು ಆಡಳಿತ ಇಲ್ಲವೇ ವಿರೋಧ ಪಕ್ಷದ ಸ್ಥಾನದಲ್ಲಿರಲಿ, ಸತ್ಯವನ್ನು ದಾಟಿ ಹೋಗುತ್ತಿರಲಿಲ್ಲ. ತಾರಾ ಅನೂರಾಧಾ ಅವರು ಎಂದಿಗೂ ಆಹಂಕಾರ ಪ್ರದರ್ಶಿಸಿದವರಲ್ಲ. ಎಲ್ಲರಿಂದಲೂ ಕಲಿಯುತ್ತಾ ಉತ್ತಮ ಸದಸ್ಯೆಯಾಗಿ ಬೆಳೆದಿದ್ದಾರೆ. ಅವರಿಬ್ಬರೂ ಮತ್ತೊಮ್ಮೆ ಪರಿಷತ್‌ಗೆ ಆಯ್ಕೆಯಾಗಲಿ.

- ಜಯಮಾಲಾ, ಪರಿಷತ್‌ ಸಭಾನಾಯಕಿ

Follow Us:
Download App:
  • android
  • ios