ಚಂಡೀಗಢ[ನ.18]: 1971ರ ಭಾರತ-ಪಾಕಿಸ್ತಾನ ನಡುವಿನ ಐತಿಹಾಸಿಕ ‘ಲಾಂಗೇವಾಲಾ ಕದನ’ದ ರೂವಾರಿ ಬ್ರಿಗೇಡಿಯರ್ (ನಿವೃತ್ತ) ಕುಲದೀಪ್ ಸಿಂಗ್ ಚಾಂದ್‌ಪುರಿ (78) ಶನಿವಾರ ನಿಧನ ಹೊಂದಿದರು.
ಚಾಂದ್‌ಪುರಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಶನಿವಾರ ಕೊನೆಯುಸಿರೆಳೆದರು. ಸೋಮವಾರ ಸೇನಾ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಯುದ್ಧ ಸಂದರ್ಭದಲ್ಲಿ ತೋರಿದ್ದ ಅಪ್ರತಿಮ ಶೌರ್ಯಕ್ಕಾಗಿ ಚಾಂದ್‌ಪುರಿ ಅವರಿಗೆ ‘ಮಹಾವೀರ ಚಕ್ರ’ ಪ್ರಶಸ್ತಿ ಪ್ರಾಪ್ತಿಯಾಗಿತ್ತು.

ಭಾರತ-ಪಾಕ್ ಯುದ್ಧ ರೂವಾರಿ: 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯ ವಿವಿಧೆಡೆ ಯುದ್ಧ ಸಂಭವಿಸಿದಾಗ ಮೊದಲ ಯುದ್ಧ ನಡೆದಿದ್ದು ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿರುವ ಭಾರತ-ಪಾಕ್ ಗಡಿಯ ಲಾಂಗೇವಾಲಾ ಎಂಬಲ್ಲಿ. ಆ ವೇಳೆ ಪಂಜಾಬ್ ರೆಜಿಮೆಂಟ್‌ನ 23ನೇ ಸೇನಾ ಬಟಾಲಿಯನ್‌ನ ಕಮಾಂಡರ್ ಆಗಿ ಯುದ್ಧ ಮುಂದಾಳತ್ವವನ್ನು ಭಾರತದ ಪರ ವಹಿಸಿದ್ದು ಬ್ರಿಗೇಡಿಯರ್ ಚಾಂದ್‌ಪುರಿ ಅವರು. ಪಾಕಿಸ್ತಾನದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಭಾರತಕ್ಕೆ ಕಷ್ಟಕರ ಸಂದರ್ಭ ಎದುರಾಗಿತ್ತು.

ಒಂದು ಕಡೆ ಪಾಕಿಸ್ತಾನದ ದಾಳಿಯ ಅಬ್ಬರದಿಂದಾಗಿ ಯುದ್ಧ ಕಣದಿಂದ ಹಿಂದೆ ಸರಿಯಬೇಕಿತ್ತು ಅಥವಾ ಹೆಚ್ಚಿನ ಸೇನಾಪಡೆಗಳು ಯುದ್ಧಕ್ಕೆ ಸೇರಿಕೊಳ್ಳುವವರೆಗೆ ಪಾಕ್ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಿತ್ತು. ಇಂಥ ಸಂದರ್ಭದಲ್ಲಿ 2000 ಸೈನಿಕರನ್ನು ಹೊಂದಿದ್ದ ಪಾಕ್ ಪಡೆಯನ್ನು ಕೇವಲ 120 ಯೋಧರ ತಮ್ಮ ತುಕಡಿಯ ಮೂಲಕ ಹಿಮ್ಮೆಟ್ಟಿಸಿದ್ದರು. ರಕ್ಷಣಾತ್ಮಕ ನೀತಿ ಅನುಸರಿಸಿ ಭಾರತದ ಗಡಿಯನ್ನು ಕಾಪಾಡಿದ್ದರು.

ಇವರ ಸಾಹಸ ಸಿನಿಮಾ ಆಗಿತ್ತು

ಖ್ಯಾತ ನಟ ಸನ್ನಿ ಡಿಯೋಲ್ ಅಭಿನಯದಲ್ಲಿ 1997ರಲ್ಲಿ ‘ಬಾರ್ಡರ್’ ಹಿಂದಿ ಚಿತ್ರ ಬಿಡುಗಡೆಯಾಗಿ ಭಾರತದಲ್ಲಿ ದೇಶಪ್ರೇಮದ ಅಲೆ ಉಕ್ಕಿಸಿತಲ್ಲದೇ, ಗಲ್ಲಾಪೆಟ್ಟಿಗೆಯನ್ನು ಧೂಳೆಬ್ಬಿಸಿತ್ತು. ಈ ಸಿನಿಮಾ ಬ್ರಿಗೇಡಿಯರ್ ಚಾಂದ್‌ಪುರಿ ಅವರ ಸಾಹಸವನ್ನೇ ಆಧರಿಸಿದ್ದಾಗಿತ್ತು.