ನವದೆಹಲಿ[ಜೂ.17]: 17ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಸೋಮವಾರ ಚಾಲನೆ ಸಿಗಲಿದ್ದು, ಸಂಸತ್ತಿನ ಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಾರಿಯ ಸಂಸದೀಯ ಕಲಾಪದ ನೇತೃತ್ವ ಹೊತ್ತುಕೊಂಡಿರುವುದು, ಕನ್ನಡಿಗರೇ ಆಗಿರುವ ಪ್ರಹ್ಲಾದ್‌ ಜೋಶಿ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ನಡುವೆ ಅಷ್ಟೇನು ಸುಗಮ ಸಂಬಂಧವಿರದ ಹಿನ್ನೆಲೆಯಲ್ಲಿ ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಗುರುತರ ಹೊಣೆ, ಸಂಸದೀಯ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ ಅವರ ಮೇಲಿದೆ.

ಕಳೆದ ಸರ್ಕಾರದ ಅವಧಿಯಲ್ಲಿ ಮತ್ತೋರ್ವ ಕನ್ನಡಿಗ, ಅನುಭವಿ ಸಂಸದ, ಸಚಿವ ಅನಂತ್‌ಕುಮಾರ್‌ ಅವರು ಈ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಪ್ರಹ್ಲಾದ್‌ ಜೋಶಿ ಸಂಸದರಾಗಿ ಅಪಾರ ಅನುಭವ ಹೊಂದಿದ್ದರೂ, ಕೇಂದ್ರದಲ್ಲಿ ಮೊದಲ ಬಾರಿಗೆ ಸಚಿವ ಹುದ್ದೆ ಅಲಂಕರಿಸಿದ್ದಾರೆ.

ಅದರಲ್ಲೂ ಅಧಿವೇಶನದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ನೇರ ಸಂಪರ್ಕ, ಸಮಾಲೋಚನೆ ಜೊತೆಜೊತೆಗೇ ವಿಪಕ್ಷಗಳ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸುಗಮವಾಗಿ ನಡೆಸಿಕೊಂಡು ಹೋಗುವ ಹೊಣೆಯನ್ನು ಜೋಶಿ ಹೇಗೆ ನಿರ್ವಹಿಸಿಕೊಂಡು ಹೋಗುತ್ತಾರೆ ಎನ್ನುವ ಕುತೂಹಲವಿದೆ.