ಬ್ರುಸೆಲ್ಸ್‌(ಸೆ.18): ಗುಣಪಡಿಸಲು ಸಾಧ್ಯವೇ ಇಲ್ಲ ಎಂಬಂಥ ಕಾಯಿಲೆಯಿಂದ ಬಳಲುತ್ತಿರುವವರು, ದೈಹಿಕವಾಗಿ ನಿಶ್ಚಲ ಸ್ಥಿತಿಗೆ ತಲುಪಿದಂಥ ವಯಸ್ಕರಿಗೆ ಇಚ್ಛಾಮರಣ ನೀಡಿರುವಂಥ ಎಷ್ಟೋ ಪ್ರಕರಣಗಳು ವಿಶ್ವಾದ್ಯಂತ ನಡೆದಿವೆ. ಆದರೆ, ಇದೇ ಮೊದಲ ಬಾರಿಗೆ ಬೆಲ್ಜಿಯಂನಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗನಿಗೆ ದಯಾಮರಣವನ್ನು ಕಲ್ಪಿಸಲಾಗಿದೆ. ಗುಣಪಡಿಸಲಾಗದಂಥ ಸ್ಥಿತಿಗೆ ತಲುಪಿದ್ದ ಹಿನ್ನೆಲೆಯಲ್ಲಿ 17 ಬಾಲಕನಿಗೆ ಸಾವಿನ ಮೂಲಕ ಮುಕ್ತಿ ನೀಡಲಾಗಿದೆ. 2 ವರ್ಷಗಳ ಹಿಂದೆ ದಯಾಮರಣಕ್ಕೆ ವಯಸ್ಸಿನ ಮಿತಿಯನ್ನು ರದ್ದುಗೊಳಿಸಿದ ಬಳಿಕ ಬೆಲ್ಜಿಯಂನಲ್ಲಿ ನಡೆದ ಮೊದಲ ಪ್ರಕರಣವಿದು.

ಯಾವುದೇ ವಯಸ್ಸಿನವರಿಗೂ ದಯಾಮರಣ ಕಲ್ಪಿಸುವ ಏಕೈಕ ರಾಷ್ಟ್ರ ಬೆಲ್ಜಿಯಂ ಆಗಿದ್ದು, ದಯಾಮರಣದ ಮೂಲಕ ಸಾವಿಗೀಡಾದ ಹುಡುಗನ ಕಾಯಿಲೆಯ ವಿವರವನ್ನು ಫೆಡರಲ್ಯೂಥನೇಷಿಯಾ ಕಮಿಷನ್ಬಹಿರಂಗಪಡಿಸಿಲ್ಲ. ‘‘ಮಕ್ಕಳಿಗೆ ದಯಾಮರಣ ಕಲ್ಪಿಸುವಂತೆ ಕೋರಿ ಹಲವಾರು ಅರ್ಜಿಗಳು ಬರುತ್ತವೆ. ಅವುಗಳಲ್ಲಿ ಅನೇಕ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಹಾಗಂತ, ನಾವು ಅಂಥವರ ಘನತೆಯ ಮರಣಕ್ಕೆ ಒಪ್ಪುತ್ತಿಲ್ಲ ಎಂದರ್ಥವಲ್ಲ,’’ ಎಂದು ದಯಾಮರಣ ಆಯೋಗದ ಅಧ್ಯಕ್ಷರಾದ ವಿಮ್ಡಿಸ್ಟೆಲ್ಮನ್ಸ್ಅಭಿಪ್ರಾಯಪಟ್ಟಿದ್ದಾರೆ.

ಪ್ರಕ್ರಿಯೆ ಹೇಗೆ?:

ಉಪಶಮನವಾಗದ ಕಾಯಿಲೆಯಿದ್ದರೆ ಮಕ್ಕಳು ಕೂಡ ದಯಾಮರಣಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲು ವೈದ್ಯರ ತಂಡ ಮತ್ತು ಸ್ವತಂತ್ರ ಮನೋರೋಗ ತಜ್ಞ ಅಥವಾ ಮನಶ್ಶಾಸ್ತ್ರಜ್ಞ ಅರ್ಜಿಯ ಪರಿಶೀಲನೆ ನಡೆಸುತ್ತದೆ. ನಂತರ, ಮಗುವಿನ ಹೆತ್ತವರು ಅಥವಾ ಪೋಷಕರ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ಇದಾದ ಬಳಿಕ, ದಯಾಮರಣಕ್ಕೆ ಅನುಮತಿ ನೀಡಲಾಗುತ್ತದೆ.

18ರೊಳಗಿನವರಿಗೂ ಅವಕಾಶ:

ಗುಣಪಡಿಸಲಾಗದಂತಹ ದೈಹಿಕ ಅಥವಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಯಾಮರಣ ಕಲ್ಪಿಸುವ ಅವಕಾಶವನ್ನು 2002ರಲ್ಲಿ ಬೆಲ್ಜಿಯಂ ಸರ್ಕಾರ ನೀಡಿತ್ತು. ಆರಂಭಿಕ ಪ್ರಸ್ತಾಪದಲ್ಲಿ ಅಪ್ರಾಪ್ತ ವಯಸ್ಸಿನವರನ್ನೂ ಇದರ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ, ರಾಜಕೀಯ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಅಂತಿಮ ಕಾನೂನು ರೂಪುಗೊಂಡಾಗ ಮಕ್ಕಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಯಿತು. ನಂತರ, 2014ರಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದ ಬಳಿಕ ಕಾನೂನನ್ನು ಬದಲಿಸಿ, 18ರೊಳಗಿನವರಿಗೂ ದಯಾಮರಣಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ದಯಾಮರಣಕ್ಕೆ ಒಳಗಾಗುವ ಮಗುವು ದಯಾಮರಣ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಬೇಕು ಮತ್ತು ಹೆತ್ತವರ ಅನುಮತಿಯೂ ಬೇಕು ಎಂಬ ಷರತ್ತುಗಳನ್ನು ಹಾಕಲಾಯಿತು.

ದಯಾಮರಣಕ್ಕೆ ಎಲ್ಲೆಲ್ಲಿದೆ ಅವಕಾಶ?

ನೆದರ್ಲೆಂಡ್‌, ಬೆಲ್ಜಿಯಂ, ಐರ್ಲೆಂಡ್‌, ಕೊಲಂಬಿಯಾ, ಲುಕ್ಸೆಂಬರ್ಗ್‌, ಸ್ವಿಜರ್ಲೆಂಡ್‌, ಜರ್ಮನಿ, ಜಪಾನ್‌, ಕೆನಡಾ, ಅಮೆರಿಕದ ಕೆಲವು ರಾಜ್ಯಗಳಲ್ಲಿ ದಯಾಮರಣ ಕಾನೂನುಬದ್ಧವಾಗಿದೆ.

ಭಾರತದಲ್ಲಿದೆಯೇ ಅವಕಾಶ?

ಭಾರತದಲ್ಲಿ ಸಾತ್ವಿಕ ದಯಾಮರಣಕ್ಕೆ ಅವಕಾಶವಿದೆ. ನರ್ಸ್ಅರುಣಾ ಶ್ಯಾನಭಾಗ್ಪ್ರಕರಣ ಸಂಬಂಧದ ವಿಚಾರಣೆ ವೇಳೆ ಅಂದರೆ 2011ರಲ್ಲಿ ಸುಪ್ರೀಂ ಕೋರ್ಟ್ಇದನ್ನು ಕಾನೂನುಬದ್ಧಗೊಳಿಸಿತು. ಸಾತ್ವಿಕ ದಯಾಮರಣವೆಂದರೆ, ರೋಗಿಗೆ ಅಳವಡಿಸಲಾದ ಜೀವರಕ್ಷಕ ವ್ಯವಸ್ಥೆಯನ್ನು ತೆಗೆಯುವ ಮೂಲಕ, ಅವರಿಗೆ ಸಾವು ಒದಗಿಸುವುದು.