ದುಬೈ(ಜೂ.07): ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ 8 ಮಂದಿ ಭಾರತೀಯರು ಸೇರಿ ಒಟ್ಟು 17 ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಓಮನ್‌ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿದ್ದು, 8 ಮಂದಿ ಭಾರತೀಯರು ಸೇರಿ 17 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್ಸಿನಲ್ಲಿ ವಿವಿಧ ದೇಶಗಳ ಒಟ್ಟು 31 ಪ್ರಯಾಣಿಕರಿದ್ದು, ದುಬೈನ ರಶಿದಿಯಾ ಬಳಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಸ್ ಮಗುಚಿಬಿದ್ದಿದೆ ಎನ್ನಲಾಗಿದೆ. ದುಬೈಯಲ್ಲಿರುವ ಭಾರತೀಯ ರಾಯಭಾರ ಕಚೇರಿ ದುರ್ಘಟನೆಯಲ್ಲಿ ಕನಿಷ್ಠ 8 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದೆ.

ಮೃತ ಭಾರತೀಯರನ್ನು ರಾಜಗೋಪಾಲನ್, ಫೆರೋಜ್ ಖಾನ್ ಪಠಾಣ್, ರೇಶ್ಮಾ ಫೆರೊಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್ ಮತ್ತು ತಿಲಕ್ರಾಮ್ ಜವಾಹರ್ ಠಾಕೂರ್ ಎಂದು ಗುರುತಿಸಲಾಗಿದೆ.