'ಪರ್ಜನ್ಯ ಜಪ ಮಾಡುವುದು ಮೂಢನಂಬಿಕೆ ಎನ್ನುವ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಯಾಗಿದ್ದಾಗ ತಾವೇ ಪರ್ಜನ್ಯ ಯಾಗ ನಡೆಸಿದ್ದಾರೆ. ಇದಕ್ಕಾಗಿ ಪ್ರತಿ ದೇವಾಲಯಕ್ಕೆ 5 ಸಾವಿರ ರು.ನಂತೆ ಒಟ್ಟು 17 ಕೋಟಿ ರು. ವೆಚ್ಚ ಮಾಡಿದ್ದಾರೆ. ಇದಿಷ್ಟೇ ಅಲ್ಲ, ಗ್ರಹಣದಿಂದ ನಾಡಿನ ಮೇಲೆ ಕೆಟ್ಟಪರಿಣಾಮ ಉಂಟಾಗುತ್ತದೆ ಎಂದು ಶೈವ ಹಾಗೂ ವೈಷ್ಣವ ದೇವಾಲಯಗಳಲ್ಲಿ ಪೂಜೆಗೆ ಬಿಜೆಪಿ ಸರ್ಕಾರದ ವೇಳೆ ಸುತ್ತೋಲೆ ಹೊರಡಿಸಲಾಗಿದೆ. ಈಗ ಯಾವುದನ್ನು ಮೌಢ್ಯ ಎಂದು ಶೆಟ್ಟರ್ ಹೇಳುತ್ತಿದ್ದಾರೆಯೋ ಅದನ್ನು ಅವರೇ ಮಾಡಿಸಿದ್ದರು. ನಾನು ಮಾಡಿದ್ದು ಕೇವಲ ಪೂಜೆ ಮಾತ್ರ.'
ಬೆಂಗಳೂರು(ಜೂ.08): 'ಪರ್ಜನ್ಯ ಜಪ ಮಾಡುವುದು ಮೂಢನಂಬಿಕೆ ಎನ್ನುವ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಯಾಗಿದ್ದಾಗ ತಾವೇ ಪರ್ಜನ್ಯ ಯಾಗ ನಡೆಸಿದ್ದಾರೆ. ಇದಕ್ಕಾಗಿ ಪ್ರತಿ ದೇವಾಲಯಕ್ಕೆ 5 ಸಾವಿರ ರು.ನಂತೆ ಒಟ್ಟು 17 ಕೋಟಿ ರು. ವೆಚ್ಚ ಮಾಡಿದ್ದಾರೆ. ಇದಿಷ್ಟೇ ಅಲ್ಲ, ಗ್ರಹಣದಿಂದ ನಾಡಿನ ಮೇಲೆ ಕೆಟ್ಟಪರಿಣಾಮ ಉಂಟಾಗುತ್ತದೆ ಎಂದು ಶೈವ ಹಾಗೂ ವೈಷ್ಣವ ದೇವಾಲಯಗಳಲ್ಲಿ ಪೂಜೆಗೆ ಬಿಜೆಪಿ ಸರ್ಕಾರದ ವೇಳೆ ಸುತ್ತೋಲೆ ಹೊರಡಿಸಲಾಗಿದೆ. ಈಗ ಯಾವುದನ್ನು ಮೌಢ್ಯ ಎಂದು ಶೆಟ್ಟರ್ ಹೇಳುತ್ತಿದ್ದಾರೆಯೋ ಅದನ್ನು ಅವರೇ ಮಾಡಿಸಿದ್ದರು. ನಾನು ಮಾಡಿದ್ದು ಕೇವಲ ಪೂಜೆ ಮಾತ್ರ.'
ಪರ್ಜನ್ಯ ಜಪದ ಮೂಲಕ ಮೌಢ್ಯ ಬಿತ್ತುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಂದ ತೀವ್ರ ಟೀಕೆಗೆ ಒಳಗಾಗಿದ್ದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ ಪರಿಯಿದು. ತೀವ್ರ ಭಾವೋದ್ವೇಗದಿಂದ ತಮ್ಮನ್ನು ಹಂಗಿಸಿದ ಪ್ರತಿಪಕ್ಷದವರ ಮೇಲೆ ವಾಗ್ದಾಳಿ ನಡೆಸಲು ಬುಧವಾರ ಸದನಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಬಂದಿದ್ದ ಪಾಟೀಲ್ ಅವರು ಯಾರಿಗೂ ಅವಕಾಶ ನೀಡದೆ ಒಂದೇ ಸಮನೆ ತಾವೇ ಮಾತನಾಡಲು ಯತ್ನಿಸಿದ್ದು ಆಭಾಸ ಎನಿಸಿತ್ತು. ಜತೆಗೆ, ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದ ಸ್ವಪಕ್ಷೀಯರಾದ ರಮೇಶ್ಕುಮಾರ್ ಅವರ ಮಾತುಗಳನ್ನು ಅರ್ಥೈಸಿಕೊಳ್ಳಲಾಗದೇ ಸುತ್ತೋಲೆಗಳನ್ನು ಪ್ರದರ್ಶಿಸುತ್ತಾ ಬಿಜೆಪಿ ಮೇಲೆ ಹರಿಹಾಯಲು ಯತ್ನಿಸಿದ ಪರಿ ಸದನದಲ್ಲಿ ನಗುವಿನ ಹೊನಲೆಬ್ಬಿಸಿತ್ತು. ಜತೆಗೆ, ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿತು.
ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಹಠಾತ್ ಎದ್ದು ನಿಂತು ಲಿಖಿತ ಹೇಳಿಕೆ ನೀಡಿದ ಎಂ.ಬಿ. ಪಾಟೀಲ್ ಅವರು, ತಮ್ಮ ವಿರುದ್ಧ ಪರ್ಜನ್ಯ ಹೋಮ ನಡೆಸಿದ್ದಾಗಿ ಆರೋಪಿಸಲಾಗುತ್ತಿದೆ. ಆದರೆ, ನಾವು ನಡೆಸಿದ್ದು ಪರ್ಜನ್ಯ ಜಪ ಅಥವಾ ಪೂಜೆ ಮಾತ್ರ. ಇದರಲ್ಲಿ ಹೋಮದಂತಹ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಇಂತಹ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿದಂತೆ ಬಿಜೆಪಿ ಅವಧಿಯಲ್ಲಿ ನಾಡಿನ ವಿವಿಧ ದೇವಾಲಯಗಳಲ್ಲಿ ನಡೆದ ಪೂಜೆ, ಯಾಗ, ಹವನಾದಿಗಳನ್ನು ಭರ್ಜರಿಯಾಗಿ ನಡೆಸಿ ಕೋಟ್ಯಂತರ ರು. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದರು. ತಮ್ಮ ಆರೋಪಕ್ಕೆ ಪೂರಕವಾಗಿ ಸುತ್ತೋಲೆ ಪ್ರದರ್ಶಿಸಿದರು. ನಾಡಿನ ಕಾವೇರಿ ಹಾಗೂ ಕೃಷ್ಣಾ ನದಿಯಲ್ಲಿ ತೀರ್ಥೋದ್ಭವವಾದಾಗ ಪೂಜೆ ಸಲ್ಲಿಸುವ, ಅಣೆಕಟ್ಟು ತುಂಬಿದಾಗ ಬಾಗಿನ ಅರ್ಪಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಅದೇ ರೀತಿ ಮಳೆ ಕಡಿಮೆಯಾದಾಗ ಉತ್ತಮ ಮಳೆಯಾಗಲಿ ಎಂದು ಪೂಜೆ ಸಲ್ಲಿಸುವುದರಲ್ಲಿ ತಪ್ಪು ಇಲ್ಲ ಎಂದರು.
ಟೆನ್ಷನ್ ಏಕೆ?: ಸಚಿವರ ಭಾವಾವೇಶದ ಮಾತಿನ ಪರಿಗೆ ದಿšೂ್ಮಢರಾದ ಶೆಟ್ಟರ್ ಅವರು, ಇಷ್ಟೊಂದು ಟೆನ್ಷನ್ ಏಕೆ ಮಾಡಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರೆ, ಬಿಜೆಪಿಯ ಕೆ.ಜೆ. ಬೋಪಯ್ಯ ಅವರು, ಪೂಜೆ ಮಾಡಿದ ಮೇಲೆ ಶಾಂತಿ ಇರಬೇಕು. ಆದರೆ, ಬಿ.ಪಿ. ಹೆಚ್ಚಾಗುತ್ತಿದೆಯಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿಯ ಬಸವರಾಜ ಬೊಮ್ಮಾಯಿ ನೀವು ಬಂದು ಪೂಜೆ ಮಾಡಿ ಹೋದ ನಂತರ ಮಳೆ ನಿಂತುಬಿಟ್ಟಿದೆ. ಒಳ್ಳೆಯ ಮನಸ್ಸಿನಿಂದ ನೀವು ಪೂಜೆ ಮಾಡಿಲ್ಲ ಎಂದು ಛೇಡಿಸಿದರು. ಇದರಿಂದ ಮತ್ತಷ್ಟುಸಿಟ್ಟಿಗೆದ್ದ ಪಾಟೀಲ ಮತ್ತಷ್ಟು ಹರಿಹಾಯ್ದರು.
ಹೋಮ ಮಾಡಿಲ್ಲ ಪ್ರಾರ್ಥನೆ ಅಷ್ಟೇ
ವಿಧಾನ ಪರಿಷತ್: ಮಳೆಗಾಗಿ ಪ್ರಾರ್ಥಿಸಿ ಕೃಷ್ಣಾ ಮತ್ತು ಕಾವೇರಿಯಲ್ಲಿ ಪರ್ಜನ್ಯ ಪೂಜೆ ಮಾಡಿದ್ದೇನೆಯೇ ವಿನಃ ಹೋಮ ಹವನ ನಡೆಸಿಲ್ಲವೆಂದು ಭಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಬುಧವಾರ ವಿಧಾನ ಪರಿಷತ್ನಲ್ಲಿ ಸ್ಪಷ್ಟನೆ ನೀಡಿದರು. ಪಕ್ಷೇತರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ಅಲಮಟ್ಟಿಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಪರಿಹಾರ ವಿಷಯ ಪ್ರಸ್ತಾಪಿಸಿ ಮಾತನಾಡುವಾಗ ಸಚಿವ ಎಂ.ಬಿ.ಪಾಟೀಲ್ ಮಳೆಗಾಗಿ ಮಾಡಿರುವ ಪೂಜೆಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಮಧ್ಯಪ್ರವೇಶಿಸಿ ಮಾತನಾಡಿ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬರ ಪರಿಸ್ಥಿತಿ ನಿವಾರಣೆಗೆ ಮಳೆಗಾಗಿ ಪ್ರಾರ್ಥಿಸಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಹೋಮ ನಡೆಸುವಂತೆ ಮಾಡಿದ್ದ ಆದೇಶದ ಪ್ರತಿಯನ್ನು ಸದನದಲ್ಲಿ ತೋರಿಸಿದರು
ನೀವ್ಯಾರೂ ಲಿಂಗಾಯತರಲ್ಲ
ಪರ್ಜನ್ಯ ಫಜೀತಿ ಚರ್ಚೆ ವೇಳೆ ಪೂಜೆ, ಪುನಸ್ಕಾರ, ಬಸವ ತತ್ವಗಳ ವಿಚಾರಗಳು ನುಸುಳಿದಾಗ ಎದ್ದು ನಿಂತ ಬಿಜೆಪಿಯ ಕಾರಜೋಳ ಅವರು ಬಸವಣ್ಣನವರ ವಚನವನ್ನು ಹೇಳಲು ಮುಂದಾದಾಗ ಸಚಿವ ಎಂ.ಬಿ. ಪಾಟೀಲರ ಸುತ್ತ ಕುಳಿತ ಕಾಂಗ್ರೆಸ್ನ ಲಿಂಗಾಯತ ಶಾಸಕರು ಆಕ್ಷೇಪಣೆ ವ್ಯಕ್ತಪಡಿಸಿದರು. ಆದರೂ, ಬಿಡದ ಕಾರಜೋಳ ಅವರು ವಚನ ಓದಿ ತಾತ್ಪರ್ಯ ವಿವರಿಸಿದರು. ಅದು- ಯಾರು ಹೋಮ, ಹವನ ಮಾಡುವವರು ಹಾಗೂ ಬಹು ದೈವಗಳ ಪೂಜೆ ಮಾಡುವವರು ಲಿಂಗಾಯತರಲ್ಲ ಎಂದು ಬಸವಣ್ಣ ಹೇಳಿದ್ದಾರೆ ಎಂಬುದು. ಈ ಅರ್ಥದಲ್ಲಿ ನೀವ್ಯಾರೂ (ಕಾಂಗ್ರೆಸ್ನ ವೀರಶೈವ ಶಾಸಕರನ್ನು ಉದ್ದೇಶಿಸಿ) ಲಿಂಗಾಯತರಲ್ಲ ಎಂದಾಗ ಸಭೆಯಲ್ಲಿ ನಗೆಗಡಲು.
ಪೂಜೆಗೆ ರಾಕೆಟ್ ಹಾರುತ್ತಾ?
ಇಸ್ರೋ ತನ್ನ ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ಉಡಾವಣೆ ಪೂರ್ವದಲ್ಲಿ ತಿರುಪತಿಯಲ್ಲಿ ಪೂಜೆ ನೆರವೇ ರಿಸಿತ್ತು. ಪೂಜೆ ಮಾಡಿದರೆ ಮಾತ್ರ ರಾಕೆಟ್ ಹಾರುತ್ತದೆಯೇ? ಇದು ಮೌಢ್ಯವಲ್ಲವೇ? ಹಾಗಿದ್ದರೆ, ಇಂತಹ ಪೂಜೆಗೆ ಅವಕಾಶ ನೀಡಿದ ಕೇಂದ್ರ ಸಚಿವರ ರಾಜಿನಾಮೆಗೆ ಆಗ್ರಹಿ ಸುವಿರಾ? ಹೀಗಂತ ಸಚಿವ ಎಂ.ಬಿ. ಪಾಟೀಲ್ ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಿದರು. ಚರ್ಚೆಯ ವೇಳೆ ಇಸ್ರೋ ತಿರುಪತಿಯಲ್ಲಿ ಜಿಎಸ್ಎಲ್ವಿ ರಾಕೆಟ್ನ ಮಾದರಿಯಿಟ್ಟು ಪೂಜೆ ನಡೆಸುತ್ತಿರುವ ಚಿತ್ರವನ್ನು ಪ್ರದರ್ಶಿಸಿದ ಅವರು, ರಾಕೆಟ್ ಉಡಾವಣೆಗೂ ಪೂಜೆಯನ್ನು ಕೇಂದ್ರ ಸರ್ಕಾರ ಮಾಡಿಸಿತ್ತು. ಇದು ನಂಬಿಕೆ. ಹಾಗಂತ ಪೂಜೆ ಮಾಡಿದ ಕೂಡಲೇ ರಾಕೆಟ್ ಹಾರುತ್ತದೆಯೇ ಎಂದು ಪ್ರಶ್ನಿಸಿ ಮಳೆಗಾಗಿ ಪರ್ಜನ್ಯ ಜಪ ಸಮರ್ಥಿಸಿಕೊಂಡರು.
