ಜಮ್ಮು: ಜಮ್ಮು ಬಸ್‌ ನಿಲ್ದಾಣದಲ್ಲಿ ಗ್ರೆನೇಡ್‌ ಎಸೆದು ಇಬ್ಬರ ಸಾವಿಗೆ ಕಾರಣವಾದ ಉಗ್ರಯಾಸೀನ್‌ ಜಾವೀದ್‌ ಭಟ್‌ ಕೇವಲ 16 ವರ್ಷದ ಅಪ್ರಾಪ್ತ. ಆತನಿಗೆ ಈ ಕೃತ್ಯ ಎಸಗಲು ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ 50 ಸಾವಿರ ರು. ನೀಡಿತ್ತು ಎಂಬ ಆಘಾತಕಾರಿ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಸೆರೆಸಿಕ್ಕ ಉಗ್ರನ ಆಧಾರ್‌ ಕಾರ್ಡ್‌ ಹಾಗೂ ಆತನ ಶಾಲಾ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಯಾಸೀನ್‌ ಜನ್ಮ ದಿನಾಂಕ 2003 ಮಾ.13 ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲು ಕುಲ್ಗಾಂ ಜಿಲ್ಲೆಯ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಮುಖ್ಯಸ್ಥ ಫಯಾಜ್‌ ಸಂಘಟನೆಯ ಸದಸ್ಯ ಮುಜಾಮ್ಮಿಲ್‌ ಎಂಬಾತನಿಗೆ ಗ್ರೆನೇಡ್‌ ಅನ್ನು ಜಮ್ಮುವಿನ ಜನನಿಬಿಡ ಪ್ರದೇಶದಲ್ಲಿ ಎಸೆಯುವಂತೆ ಸೂಚನೆ ನೀಡಿದ್ದ. ಆದರೆ, ಗ್ರೆನೇಡ್‌ ಎಸೆಯಲು ಮುಜಾಮ್ಮಿಲ್‌ ಹಿಂದೇಟು ಹಾಕಿದ್ದ. ಹೀಗಾಗಿ ಬಾಲಕ ಯಾಸೀನ್‌ ಜಾವೀದ್‌ಗೆ ಗ್ರೆನೇಡ್‌ ಎಸೆಯುವ ಹೊಣೆಯನ್ನು ವಹಿಸಲಾಗಿತ್ತು ಎಂಬ ಸಂಗತಿಯೂ ತನಿಖೆಯಿಂದ ತಿಳಿದುಬಂದಿದೆ.

ಕಣಿವೆಯಲ್ಲಿ ಮತ್ತೊಂದು ಬ್ಲಾಸ್ಟ್: ಬಸ್ ನಲ್ಲಿ ಚೀನೀ ಗ್ರೆನೇಡ್ ಸ್ಫೋಟ

ಈ ನಡುವೆ ಗ್ರೆನೇಡ್‌ ದಾಳಿಯಲ್ಲಿ ಗಾಯಗೊಂಡಿದ್ದ ಮಹಮ್ಮದ್‌ ರಿಯಾಜ್‌ ಎಂಬ ವ್ಯಕ್ತಿ ಶುಕ್ರವಾರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿದೆ.

ಅಪ್ರಾಪ್ತರ ಬಳಕೆ: ಗುರುವಾರದ ದಾಳಿಯಿಂದಾಗಿ ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಉಗ್ರ ಸಂಘಟನೆಗಳು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಳಸಿಕೊಳ್ಳುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಒಂದು ವೇಳೆ ದಾಳಿ ಪ್ರಕರಣದಲ್ಲಿ ಮಕ್ಕಳು ಸಿಕ್ಕಿಬಿದ್ದರೂ, ಅವರು ಕಠಿಣ ಶಿಕ್ಷೆಯಿಂದ ಸುಲಭವಾಗಿ ಪಾರಾಗಬಹುದು ಎಂಬ ಕಾರಣಕ್ಕಾಗಿ ಹಣದಾಸೆ ತೋರಿಸಿ ಅಪ್ರಾಪ್ತರನ್ನೇ ಉಗ್ರ ಸಂಘಟನೆ ದಾಳಿಗೆ ನಿಯೋಜಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಘಟನೆಯಲ್ಲಿ ಸಿಕ್ಕಿಬಿದ್ದ ಜಾವೀದ್‌, ಅಪ್ರಾಪ್ತನಾದ ಕಾರಣ ಆತನನ್ನು ಬಾಲಾರೋಪಿ ಎಂದು ಪರಿಗಣಿಸಿ ಪ್ರತ್ಯೇಕ ಕಾನೂನಿನಡಿ ವಿಚಾರಣೆ ನಡೆಸಲಾಗುವುದು. ಆದರೆ ರಾಜ್ಯ ಸರ್ಕಾರ ಇದು ಭಯೋತ್ಪಾದನಾ ದಾಳಿಯ ಕಾರಣ ನೀಡಿ ಕಠಿಣವಾದ ಭಯೋತ್ಪಾದನಾ ನಿಗ್ರಹ ಕಾಯ್ಡೆಯಡಿ ವಿಚಾರಣೆಗೆ ಕೋರಿಕೆ ಸಲ್ಲಿಸುವ ಸಾಧ್ಯತೆ ಇದೆ.